ಹೊಸ ದಿಗಂತ ವರದಿ, ಹೊಳಲ್ಕೆರೆ:
ಕಳೆದ ಸರ್ಕಾರದ ಅವಧಿಯಲ್ಲಿ 2017-18 ನೇ ಸಾಲಿನಲ್ಲಿ ಸಾಮಾನ್ಯ ವರ್ಗದವರಿಗೆ ಮುಂಜೂರಾಗಿದ್ದ ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗಳನ್ನು ಇನ್ನೊಂದು ವಾರದಲ್ಲಿ ಕೊರೆಯಲು ಬಿಸಿಎಂ ಅಧಿಕಾರಿಗಳಿಗೆ ಸೂಚಿಸಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಗಂಗಾಕಲ್ಯಾಣ ಯೋಜನೆ ಫಲಾನುಭವಿಗಳು ಎಚ್ಚರಿಸಿದ್ದಾರೆ.
ಹೊಳಲ್ಕೆರೆ ಪಟ್ಟಣದ ಒಂಟಿ ಕಂಬದ ಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳ ಸಭೆಯಲ್ಲಿ ಈ ಕುರಿತು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.
ಶಾಸಕ ಎಂ.ಚಂದ್ರಪ್ಪ, ಹಿಂದಿನ ಸರ್ಕಾರದ ಅವಧಿಯಲ್ಲಿ 2017-18ನೇ ಸಾಲಿನಲ್ಲಿ ಮುಂಜುರಾದ ಕೊಳವೆಬಾವಿಗಳನ್ನು ಕೊರೆಸದೆ ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಲಾಗಿದೆ. ಅಲ್ಲದೇ ಸಿರಿಗೆರೆ ಜಗದ್ಗುರುಗಳು ಸಹ ಕೊಳವೆಬಾವಿ ಕೊರೆಸುವಂತೆ ಸೂಚಿಸಿದ್ದಾರೆ. ಶ್ರೀಗಳವರ ಮಾತಿಗೂ ಬೆಲೆ ಕೊಡದಂತೆ ಶಾಸಕ ಎಂ.ಚಂದ್ರಪ್ಪ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಕೊಳವೆಬಾವಿ ಮುಂಜೂರಾಗಿ ಮೂರು ವರ್ಷ ಕಳೆದರೂ ಕೂಡ ಕೊಳವೆಬಾವಿ ಕೊರೆಯಲು ಅನುಮತಿ ನೀಡದೆ ರೈತರಿಗೆ ಅನ್ಯಾಯ ಮಾಡುತಿದ್ದಾರೆ. ಆ ಸಂದರ್ಭದಲ್ಲಿಯೇ ಕೊರೆಸಿದ್ದರೆ ಮೂರು ವರ್ಷಗಳಲ್ಲಿ ರೈತರ ಬದುಕು ಹಸನಾಗುತಿತ್ತು. ಶಾಸಕರಾದವರು ಎಲ್ಲರನ್ನು ಸಮಾನ ರೀತಿಯಲ್ಲಿ ಕಾಣಬೇಕು. ಸರ್ಕಾರ ಯಾವುದೇ ಇರಲಿ, ಅದು ಜನರ ತೆರಿಗೆ ಹಣದಿಂದ ನಡೆಯುತ್ತದೆ. ಹಾಗಾಗಿ ಜನಪರವಾಗಿ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಈಗಾಗಲೇ ನಾವು ಹಲವು ಬಾರಿ ಶಾಸಕರಿಗೆ ಮನವಿ ಮಾಡಿದ್ದೇವೆ. ಅಲ್ಲದೇ ಬಿಸಿಎಂ ಜಿಲ್ಲಾಧಿಕಾರಿಗಳಿಗೂ ಕೂಡ ಹಲವು ಬಾರಿ ವಿಷಯ ತಿಳಿಸಿದ್ದೇವೆ. ಒಬ್ಬರ ಮೇಲೆ ಒಬ್ಬರೂ ಸಬೂಬು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಇಬ್ಬರ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಬಡ ರೈತರನ್ನು ಬಲಿಪಶು ಮಾಡುತಿದ್ದಾರೆ. ಒಂದು ವಾರದೊಳಗೆ ಗಂಗಾಕಲ್ಯಾಣ ಯೋಜನೆಯ ಕೊಳವೆಬಾವಿ ಕೊರೆಸಲು ಮುಂದಾಗಬೇಕ. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾತ್ತದೆ ಎಂದು ಎಚ್ಚರಿಸಿದ್ದಾರೆ.
ಚಿಕ್ಕಎಮ್ಮಿಗನೂರು ಎ.ಚಂದ್ರಪ್ಪ, ಎನ್.ಪ್ರಕಾಶ್, ಕರಿಯಪ್ಪ, ಬಸವರಾಜಪ್ಪ, ಮುದ್ದಣ್ಣ, ಅಣ್ಣಪ್ಪ, ನಾಗೇಂದ್ರಪ್ಪ, ರಾಜಪ್ಪ, ಓಂಕಾರಪ್ಪ, ಟಿ.ಡಿ.ಚಂದ್ರಪ್ಪ, ವಿರುಪಾಕ್ಷಪ್ಪ, ಲಕ್ಷ್ಮೀಶ್, ರವಿಕುಮಾರ್, ಶಿವಣ್ಣ, ಪ್ರಕಾಶ್, ತಿಪ್ಪೇಸ್ವಾಮಿ, ರವಿಕುಮಾರ್, ಬಸವಕುಮಾರ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.