spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚಿಕ್ಕಮಗಳೂರು| ಜಿಲ್ಲೆಯ 700 ಅಂಗನವಾಡಿ ಕಾಮಗಾರಿ ಆರಂಭ: ಒಂದು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ

- Advertisement -Nitte

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಜಿಲ್ಲೆಯ ಸುಮಾರು 700 ಅಂಗನವಾಡಿ ಕೇಂದ್ರದಲ್ಲಿ ವಿವಿಧ ಯೋಜನೆ ಅಡಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳು ನಡೆಯುತ್ತಿದೆ, ಒಂದು ವರ್ಷದಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭಹು ತಿಳಿಸಿದರು.
ನಗರದ ಜಿಲ್ಲಾ ಆಟದ ಮೈದಾನದಲ್ಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬನ್ನಿಸ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 1825 ಅಂಗನವಾಡಿ ಕೇಂದ್ರಗಳಿದ್ದು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಸುಸ್ಸಜ್ಜಿತವಾದ ಕೊಠಡಿ, ಅಡುಗೆಮನೆ, ಉಗ್ರಾಣ, ಶೌಚಾಲಯ, ವಿದ್ಯುತ್, ಕುಡಿಯುವ ನೀರು, ಕೈತೋಟ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸುವ ಮಹತ್ತರವಾದ ಸಂಕಲ್ಪ ಹೊಂದಲಾಗಿದ್ದು ಆ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಹಕರಿಸಬೇಕು ಎಂದರು.
ಅಕ್ಟೋಬರ್ 2 ರಿಂದ ಪ್ರತಿ ಗ್ರಾಮಪಂಚಾಯಿತಿಗಳಲ್ಲಿ ಮನೆ ಮನೆ ಕಸ ಸಂಗ್ರಹಣೆ ಮೂಲಕ ಸ್ವಚ್ಚತೆ ಕುರಿತು ಅಭಿಯಾನ ನಡೆಯಲಿದೆ. ಮುಖ್ಯವಾಗಿ ನೈರ್ಮಲ್ಯ, ಶೌಚಾಲಯ, ಘನತ್ಯಾಜ್ಯ ನಿರ್ವಹಣೆ ಸಂಬಂದಿಸಿದಂತೆ ಜಾಗೃತಿ ಅಭಿಯಾನ ನಡೆಯಲಿದೆ, ಇದಕ್ಕಾಗಿ ಎನ್.ಎಸ್.ಎಸ್. ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರತಿ ಗ್ರಾಮಪಂಚಾಯಿತಿಗಳು ವರ್ಷಕ್ಕೆ 2 ಬಾರಿ ಪ್ರತಿ ಗ್ರಾಮಗಳಲ್ಲಿ ಸ್ವಚ್ಚತಾಕಾರ್ಯದ ಅಭಿಯಾನ ಕೈಗೊಳ್ಳಬೇಕು, ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಚಗೊಳಿಸುವ ಮೂಲಕ ಜನರಲ್ಲಿ ಪರಿಸರ ನೈರ್ಮಲ್ಯದ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಮಗುವನ್ನು ಕಲಿಕೆಯನ್ನು ಕ್ರಿಯಾಶೀಲಗೊಳಿಸುವ ನಿಟ್ಟಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಅಂಗನವಾಡಿ ಕಾರ್ಯಕರ್ತೆಯರಿಗೆ ಮೂರು ದಿನಗಳ ಕಾಲ ಬನ್ನಿಸ್ ತರಬೇತಿ ಶಿಬಿರ ಆಯೋಜಿಸಿದ್ದು ಇದರ ಸದುಪಯೋಗಪಡೆದುಕೊಳ್ಳುಬೇಕು, ಮಗುವಿನ ಬೌದ್ಧಿಕ ವಿಕಾಸ ಮಟ್ಟ ಹಾಗೂ ಕಲಿಕೆ ವಿಧಾನವನ್ನು ಶಕ್ತಿಗೊಳಿಸಲು ಉತ್ತಮ ವಿಧಾನವಾಗಿದೆ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಆಯುಕ್ತ ಎ.ಎನ್.ಮಹೇಶ್ ಮಾತನಾಡಿ ಖಾಸಗಿ ಸಂಸ್ಥೆಗಳಂತೆ ಅಂಗನವಾಡಿ ಕೇಂದ್ರಗಳಲ್ಲಿ ಮಗುವಿಗೆ ಔಪಚಾರಿಕ ಶಿಕ್ಷಣವನ್ನು ಚಟುವಟಿಕೆ ಆಧಾರಿತವಾಗಿ ನೀಡುವ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಅಂಗನವಾಗಿ ಕಾರ್ಯಕರ್ತೆಯರಿಗೆ 3 ದಿನಗಳ ಕಾಲ ಬನ್ನಿಸ್ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದರು.
ಚಟುವಟಿಕೆ ಆಧಾರಿತ ಶಿಕ್ಷಣ ಇದಾಗಿದ್ದು ಮಕ್ಕಳನ್ನು ಮೊಲಗಳ ಮಾದರಿಯಲ್ಲಿ ಅವರನ್ನು ಕಲಿಕೆಯಲ್ಲಿ ಉತ್ಸಾಹದ ಚಿಲುಮೆಗಳಾಗುವಂತೆ ಮಾಡುವುದಾಗಿದೆ ಎಂದು ಹೇಳಿದರು.
ಜಿಲ್ಲೆಯ 1825 ಅಂಗನವಾಡಿ ಕೇಂದ್ರದಲ್ಲಿ ಬನ್ನಿಸ್ ತಂಡ ಇರಬೇಕು ಎಂಬ ಉದ್ದೇಶ ಹೊಂದಿದ್ದು ಮಗುವಿಗೆ ಗುಣಮಟ್ಟದ ಶಿಕ್ಷಣದ ಮೂಲಕ ಕ್ರಿಯಾಶೀಲತೆ, ಸೃಜನಶೀಲತೆ ವೃದ್ಧಿಸುವ ಹೊಣೆಗಾರಿಕೆ ಅಂಗನವಾಡಿ ಕಾರ್ಯಕರ್ತೆಯರದ್ದು ಆ ನಿಟ್ಟನಲ್ಲಿ ತರಬೇತಿ ಪಡೆದು ಅದನ್ನು ಸಾಕಾರಗೊಳಸಬೇಕು ಎಂದು ಕಿವಿಮಾತು ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಷಡಕ್ಷರಿ ಮಾತನಾಡಿ ಗುಣಾತ್ಮಕ ಚಟುವಟಿಕೆ ಆಧಾರಿತ ಶಿಕ್ಷಣದ ಮೂಲಕ ಭವಿಷ್ಯದ ಮಕ್ಕಳನ್ನು ರೂಪಿಸುವ ಮಹತ್ತರ ಹೊಣೆಗಾರಿಕೆ ಅಂಗನವಾಡಿ ಶಾಲಾ ಶಿಕ್ಷಕಿಯರದ್ದು. ಆ ನಿಟ್ಟಿನಲ್ಲಿ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಬನ್ನಿಸ್ ಎಂದರೆ ಮೊಲ ಎಂದರ್ಥ ಮಕ್ಕಳಿಗೆ ಆರಂಭದ ದಿನಗಳಲ್ಲಿ ಚಟುವಟಿಕೆ ಆಧಾರಿತ ಶಿಕ್ಷಣವನ್ನು ನೀಡಿದ್ದಲ್ಲಿ ಕಲಿಕೆ ಎಂಬುದು ಮಕ್ಕಳಿಗೆ ಹೆಚ್ಚು ಹೊರೆಯಾಗುವುದಿಲ್ಲ, ಕಲಿಕೆಯಲ್ಲಿ ಮತ್ತಷ್ಟು ಉತ್ಸಾಹ ತೋರಲಿದ್ದಾರೆ. ಉತ್ತಮ ಶಿಕ್ಷಣವಂತರಾಗಿ ರೂಪಿಸುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ತರಬೇತಿ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ತಾಲ್ಲೂಕು ಹಂತದಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ ಇದಕ್ಕಾಗಿ ಜಿಲ್ಲಾಪಂಚಾಯಿತಿ ಇಲಾಖೆಗಳು ಸಹಕಾರ ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ಈ ವೇಳೆ ಬನ್ನಿಸ್ ತರಬೇತುದಾರರಾಗಿ ಬೆಂಗಳೂರಿನ ಡಾ.ಕೃಪಾ ವಿಜಯ್ ಅಂಗನವಾಡಿ ಕಾರ್ಯಕರ್ತೆಯರಿಗೆ ಶಿಕ್ಷಣದ ಹೊಸ ವಿಧಾನಗಳ ಕುರಿತು ಚಟುವಟಿಕೆ ಮೂಲಕ ಪ್ರಾತ್ಯಕ್ಷಿಕೆ ತೋರಿಸಿದರು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೃಷ್ಣಪ್ಪ, ಜಿಲ್ಲಾ ಜಂಟಿ ಕಾರ್ಯದರ್ಶಿ ನೀಲಕಂಠಚಾರ್, ಗೈಡ್ಸ್ ಜಿಲ್ಲಾ ಆಯುಕ್ತರಾದ ಡಿ.ಎಸ್.ಮಮತಾ, ಕೇಂದ್ರ ಸ್ಥಾನಿಕ ಆಯುಕ್ತ ಸಿದ್ದೇಗೌಡ, ಕಿರಣ್‍ಕುಮಾರ್, ನವೀನ್, ವಾಸಂತಿ, ಪ್ರತಿಮಾ, ಭಾಗ್ಯ ಸೇರಿದಂತೆ ಮತ್ತಿತರರು ಇದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss