ಹೊಸದಿಗಂತ ವರದಿ, ಚಿಕ್ಕಮಗಳೂರು:
ಜಿಲ್ಲೆಗೆ ಸಂಬಂಧಿಸಿದಂತೆ ೭ ಪ್ರಮುಖ ಯೋಜನೆಗಳಿಗೆ ಆಧ್ಯತೆ ನೀಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿಯ ಬಜೆಟ್‌ನಲ್ಲಿ ಕಾಫಿ ನಾಡಿಗೆ ಉತ್ತಮ ಕೊಡುಗೆ ನೀಡಿದ್ದಾರೆ.
ಬಯಲು ಹಾಗೂ ಮಲೆನಾಡು ಭಾಗಗಳೆರಡನ್ನು ಸಮನಾಗಿ ಪರಿಗಣಿಸಿರುವುದರ ಜೊತೆಗೆ ಜಿಲ್ಲೆಯ ಆರ್ಥಿಕ ಜೀವನಾಡಿ ಎನಿಸುತ್ತಿರುವ ಪ್ರವಾಸೋಧ್ಯಮಕ್ಕೆ ಉತ್ತೇಜನ ನೀಡುವ ಯೋಜನೆಗಳನ್ನು ಮುಖ್ಯಮಂತ್ರಿಗಳು ಪ್ರಸ್ತಾಪಿಸುವ ಮೂಲಕ ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ಜಿಲ್ಲೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದಾರೆ.
ನೀರಾವರಿ, ಆರೋಗ್ಯ, ಪ್ರತ್ಯೇಕ ಹಾಲು ಒಕ್ಕೂಟ, ಆನೆ ಹಾವಳಿ ನಿಯಂತ್ರಣ, ರೈಲು ಯೋಜನೆ ಹಾಗೂ ಪ್ರವಾಸೋದ್ಯಮ ಯೋಜನೆಗಳನ್ನು ಬಜೆಟ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ.
೭೯ ಕೆರೆ ತುಂಬಿಸಲು ಅನುದಾನ
ತರೀಕೆರೆ ಏತ ನೀರಾವರಿ ಕಾಮಗಾರಿಯಡಿಯಲ್ಲಿ ಭದ್ರಾ ಉಪ ಕಾಲುವೆಯಿಂದ ೨೦೧೫೦ ಹೆಕ್ಟರ್ ಪ್ರದೇಶಕ್ಕೆ ನೀರುಣಿಸುವ ೭೯ ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುಷ್ಠಾನಕ್ಕೆ ಒಟ್ಟು ೩೦೦೦ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದೇ ಅನುದಾನದಲ್ಲಿ ಚಿತ್ರದುರ್ಗಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆಗೂ ಅನುದಾನ ಹಂಚಿಕೆ ಆಗಲಿದೆ.
ಈ ಮೂಲಕ ಸದಾ ಬರಪೀತ ಪ್ರದೇಶ ಎಂದು ಹಣೆ ಪಟ್ಟಿ ಹಚ್ಚಿಕೊಂಡಿರುವ ಜಿಲ್ಲೆಯ ಬಯಲು ತಾಲ್ಲೂಕುಗಳಿಗೆ ಶಾಶ್ವತ ನೀರಾವರಿ ಯೋಜನೆ ಬೇಕು ಎನ್ನುವ ದಶಕಗಳ ಕೂಗಿಗೆ ಸ್ಪಂದನೆ ಸಿಕ್ಕಂತಾಗಿದೆ. ರೈತರಲ್ಲೂ ಇದರಿಂದ ಸಂತಸ ತಂದಿದೆ.
ಗಿರಿಯಲ್ಲಿ ರೋಪ್ ವೇ
ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರ ವೇಗವಾಗಿ ಬೆಳೆಯುತ್ತಿರುವುದನ್ನು ಪರಿಗಣಿಸಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಗಿರಿ ಶ್ರೇಣಿಯಲ್ಲಿ ರೋಪ್ ವೇ ಸೌಲಭ್ಯ ಕಲ್ಪಿಸಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ಜೊತೆಗೆ ಒಂದಷ್ಟು ಉದ್ಯೋಗ ಸೃಷ್ಠಿಸುವ ಯೋಜನೆಗೆ ಬಜೆಟ್‌ನಲ್ಲಿ ಆಧ್ಯತೆ ನೀಡಲಾಗಿದೆ.
ಮುಳ್ಳಯ್ಯನಗಿರಿ ಹಾಗೂ ದತ್ತಪೀಠಗಳಲ್ಲಿ ಕೇಂದ್ರ ಸರ್ಕಾರದ ಸಾಗರ ಮಾಲಾ ಯೋಜನೆಯಡಿ ರೋಪ್‌ವೇಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ತಿಳಿಸಿದ್ದಾರೆ.
ಹೆಲಿಪೋರ್ಟ್‌ಗೆ ಅನುದಾನ
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯದಿಂದಲೂ ಜಿಲ್ಲೆಗೆ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಹೆಲಿಪೋರ್ಟ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಚಿಕ್ಕಮಗಳೂರು ಸೇರಿದ ರಾಜ್ಯದ ಇತರೆ ೨ ಜಿಲ್ಲೆಗಳಿಗೆ ಸೇರಿ ಒಟ್ಟು ೩೦ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಪ್ರತ್ಯೇಕ ಹಾಲು ಒಕ್ಕೂಟ
ಪ್ರತಿ ವರ್ಷದ ಬಜೆಟ್ ಸಂದರ್ಭದಲ್ಲಿ ಜಿಲ್ಲೆಯ ರೈತರು ಆಸೆಗಣ್ಣಿನಿಂದ ನಿರೀಕ್ಷಿಸುತ್ತಿದ್ದ ಪ್ರತ್ಯೇಕ ಹಾಲು ಒಕ್ಕೂಟದ ಕನಸಿಗೆ ಈ ಬಾರಿಯ ಬಜೆಟ್‌ನಲ್ಲಿ ನೀರೆರೆಯುವ ಕಾರ್ಯ ಮುಖ್ಯಮಂತ್ರಿಗಳಿಂದಾಗಿದೆ. ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟವನ್ನು ರಚಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಜಿಲ್ಲೆಗೆ ಸಂಚಾರಿ ಕ್ಲಿನಿಕ್
ಆರೋಗ್ಯ ಕ್ಷೇತ್ರದಲ್ಲೂ ಜಿಲ್ಲೆಯನ್ನು ಪರಿಗಣಿಸಲಾಗಿದ್ದು, ಮುಖ್ಯಮಂತ್ರಿ ಆರೋಗ್ಯ ವಾಹಿನಿ ಎನ್ನುವ ಹೊಸ ಯೋಜನೆಯಡಿ ಸಂಚಾರಿ ಕ್ಲಿನಿಕ್‌ಗಳನ್ನು ಆರಂಭಿಸುತ್ತಿದ್ದು ವಿವಿಧ ಜಿಲ್ಲೆಗಳ ಜೊತೆ ಚಿಕ್ಕಮಗಳೂರು ಜಿಲ್ಲೆಗೂ ಸೌಲಭ್ಯ ನೀಡಲಾಗಿದೆ. ಇದಕ್ಕಾಗಿ ೧೧ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಚಿಕ್ಕಮಗಳೂರು-ಬೇಲೂರು ರೈಲ್ವೆ
ಚಿಕ್ಕಮಗಳೂರಿನಿಂದ ಹಾಸನ ಜಿಲ್ಲೆಗೆ ರೈಲು ಸಂಪರ್ಕ ಕಲ್ಪಿಸುವ ಮೂಲಕ ಬೆಂಗಳೂರು ಹಾಗೂ ಕರಾವಳಿ ಭಾಗದ ಜಿಲ್ಲೆಗಳನ್ನು ಸಂಪರ್ಕಿಸುವ ರೈಲು ಯೋಜನೆ ಬೇಕೆಂಬ ಹತ್ತಾರು ವರ್ಷಗಳ ಬೇಡಿಕೆಗೆ ಈ ಬಾರಿಯ ಬಜೆಟ್‌ನಲ್ಲಿ ಆಧ್ಯತೆ ನೀಡಿರುವುದು ಮಹತ್ವದ್ದಾಗಿದೆ.
ಚಿಕ್ಕಮಗಳೂರು-ಬೇಲೂರು, ಬೇಲೂರು-ಹಾಸನ ರೈಲು ಯೋಜನೆಗಳನ್ನು ಕೇಂದ್ರ ಸರ್ಕಾರದೊಂದಿಗೆ ೫೦:೫೦ ಅನುಪಾತದಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಆನೆ ನಿಯಂತ್ರಣಕ್ಕೆ ೧೦೦ ಕೋಟಿ
ಮಲೆನಾಡು ಭಾಗದಲ್ಲಿ ನಿರಂತರ ಆನೆ ಹಾವಳಿಯಿಂದಾಗಿ ಪ್ರಾಣ ಹಾಗೂ ಬೆಳೆ ಹಾನಿ ಸಂಭವಿಸುತ್ತಿದ್ದು, ಅದನ್ನು ನಿಯಂತ್ರಿಸಲು ಯೋಜನೆ ರೂಪಿಸಬೇಕು ಎನ್ನುವ ಕಾಫಿ ಬೆಳೆಗಾರರು ಹಾಗೂ ರೈತರ ಬೇಡಿಕೆಗೂ ಮುಖ್ಯಮಂತ್ರಿಗಳು ಈ ಬಾರಿ ಬಜೆಟ್‌ನಲ್ಲಿ ಮನ್ನಣೆ ನೀಡಿದ್ದಾರೆ.
ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಆನೆಗಳ ಹಾವಳಿ ನಿಯಂತ್ರಣಕ್ಕೆ ರೈಲು ಹಳಿಗಳಿಂದ ತಡೆ ಬೇಲಿ ನಿರ್ಮಿಸಲು ಒಟ್ಟು ೧೦೦ ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ.
ಇಷ್ಟರ ನಡುವೆಯೂ ಕಾಫಿ ಬೆಳೆಗಾರರ ಹಲವು ಬೇಡಿಕೆಗಳು ಸೇರಿದಂತೆ ಇತರೆ ಯೋಜನೆಗಳಿಗೆ ಆಧ್ಯತೆ ನೀಡಬೇಕಿತ್ತು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದೆ.