Sunday, August 14, 2022

Latest Posts

ರಾಜ್ಯ ಬಜೆಟ್‌: ಉಡುಪಿ ಜಿಲ್ಲೆಗೆ ಈ ಬಾರಿ ಸ್ವಲ್ಪವೇ ಸ್ವಲ್ಪ ಸಿಹಿ

ಹೊಸದಿಗಂತ ವರದಿ, ಉಡುಪಿ:

ಜಿಲ್ಲೆಗೆ ರಾಜ್ಯ ಬಜೆಟ್‌ನಲ್ಲಿ ಸಿಕ್ಕಿದ್ದು ಸ್ವಲ್ಪವೇ ಸ್ವಲ್ಪ ಸಿಹಿ. ಉಡುಪಿ ಜಿಲ್ಲೆಗೆ ನೇರವಾಗಿ ಬಂದ ಯೋಜನೆಗಳೆಂದರೆ ಕೇವಲ ಮೂರು. ಅದರಲ್ಲೆರಡು ಬೀಚ್ ಅಭಿವೃದ್ಧಿಯಾದರೆ, ಇನ್ನೊಂದು ಪೇಜಾವರ ಶ್ರೀಗಳ ಹೆಸರಿನಲ್ಲಿ ಸ್ಮೃತಿ ವನ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರ್ ನಿರ್ಮಾಣಕ್ಕೆ ಅನುದಾನ, ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಜಿಲ್ಲಾ ರಂಗ ಮಂದಿರ ಇತ್ಯಾದಿ ಬೇಡಿಕೆಗಳು ಪತ್ರಗಳಲ್ಲಿಯೇ ಉಳಿದಿವೆ.

ಬೀಚ್ ಅಭಿವೃದ್ಧಿಗೆ ₹ 20 ಕೋಟಿ: ಕರ್ನಾಟಕ ಕರಾವಳಿ ಅಭಿವೃದ್ಧಿಗೆ ವಿಶೇಷವಾಗಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಜಿಲ್ಲೆಯ ತ್ರಾಸಿ, ಮರವಂತೆ, ಒತ್ತಿನೆಣೆ ಮತ್ತಿತರ ಕಡಲತೀರಗಳನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸಲು 10 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ. ಜೊತೆಗೆ ಬೈಂದೂರು ತಾಲೂಕು ಸೋಮೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದರೊಂದಿಗೆ ಉಡುಪಿಯಲ್ಲಿ 2ಕೋಟಿ ರೂ. ವೆಚ್ಚದಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಗೌರವಾರ್ಥ ಸ್ಮೃತಿವನ ಘೋಷಣೆ ಮಾಡಲಾಗಿದೆ.

ಕರ ರಹಿತ ಡಿಸೇಲ್ ಬೇಡಿಕೆ ಈಡೇರಿಕೆ: ಉಳಿದಂತೆ ಯಾಂತ್ರೀಕೃತ ದೋಣಿಗಳಿಗೆ 1.5 ಲಕ್ಷ ಕಿಲೋ ಲೀಟರ್ ಡೀಸೆಲ್ ಮೇಲಿನ ಮಾರಾಟ ಕರ ಮರುಪಾವತಿಯ ಬದಲು, ಡಿಸೇಲ್‌ ಡೆಲಿವರಿ ಪಾಯಿಂಟ್‌ನಲ್ಲಿಯೇ ಕರರಹಿತ ದರದಲ್ಲಿ ಡಿಸೇಲ್ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಘೋಷಿಸಲಾಗಿದೆ. ಇದು ಮೀನುಗಾರರ ಬಹುದಿನಗಳ ಬೇಡಿಕೆಯಾಗಿತ್ತು. ಮೂರು ಜಿಲ್ಲೆಗಳ ಪೈಕಿ ಯಾಂತ್ರೀಕೃತ ದೋಣಿಗಳ ಬಹುಪಾಲು ಉಡುಪಿ ಜಿಲ್ಲೆಯಲ್ಲಿರುವುದರಿಂದ ಜಿಲ್ಲೆಗೆ ಹೆಚ್ಚಿನ ಪ್ರಯೋಜನ ಸಿಗಲಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯ ಸರಕಾರದಿಂದ 62 ಕೋಟಿ ರೂ. ಅನುದಾನ, ರಾಜ್ಯಾದ್ಯಂತ 30 ಕೋಟಿ ರೂ.ಗಳ ವೆಚ್ಚದಲ್ಲಿ ಮೀನು ಮಾರಾಟ ಘಟಕ ಹಾಗೂ ಮತ್ಸ್ಯ ದರ್ಶಿನಿಗಳ ಸ್ಥಾಪನೆ ಮಾಡಲಿದ್ದು, ಇದರಲ್ಲಿಯೂ ಉಡುಪಿಯ ಪಾಲು ಸಿಗಲಿದೆ.

ಪಶ್ಚಿಮವಾಹಿನಿ ಯೋಜನೆಯಲ್ಲಿ ಪಾಲು: ಗೋ ಸಂಪತ್ತಿನ ರಕ್ಷಣೆಗಾಗಿ ಪ್ರತಿ ಜಿಲ್ಲೆಗೊಂದರಂತೆ ಗೋಶಾಲೆ ಸ್ಥಾಪನೆ ಮಾಡಲು ತೀರ್ಮಾನಿಸಿದ್ದು, ಜಿಲ್ಲೆಗೆ ಒಂದು ಗೋಶಾಲೆ ಸಿಗಲಿದೆ. ಪಶ್ಚಿಮವಾಹಿನಿ ಯೋಜನೆ ಕುರಿತ ಮಾಸ್ಟರ್ ಪ್ಲ್ಯಾನ್ ಅಡಿ, ಮುಂದಿನ 5ವರ್ಷಗಳಲ್ಲಿ 3986 ಕೋಟಿ ರೂ. ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತದೆ. ಇದಕ್ಕಾಗಿ 2021-22ನೇ ಸಾಲಿನಲ್ಲಿ 500 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಉಡುಪಿ ಜಿಲ್ಲೆಗೂ ಒಂದಿಷ್ಟು ಅನುದಾನ ಬರಲಿದೆ.

ಹಂಗಾರಕಟ್ಟೆ-ಮಣಿಪಾಲ ಜಲಮಾರ್ಗ: ಮಂಗಳೂರು ಮತ್ತು ಪಣಜಿ ನಡುವೆ ಜಲಮಾರ್ಗಗಳ ಅಭಿವೃದ್ಧಿ. ಕೇಂದ್ರ ಸರಕಾರದ ರಾಷ್ಟ್ರೀಯ ಜಲಮಾರ್ಗಗಳ ಪ್ರಾಧಿಕಾರದ ಧನಸಹಾಯದೊಂದಿಗೆ ಒಟ್ಟು 60 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಐದು ಜಲಮಾರ್ಗಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಘೋಷಿಸಲಾಗಿದೆ. ಇದರಲ್ಲಿ ಉಡುಪಿ ಜಿಲ್ಲೆಯ ಹಂಗಾರಕಟ್ಟೆಯಿಂದ ಮಣಿಪಾಲದವರೆಗೆ ಸ್ವರ್ಣಾ ನದಿಯಲ್ಲಿ ಜಲಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಮುಖ್ಯಮಂತ್ರಿ ಉಲ್ಲೇಖಿಸಿದ್ದಾರೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಪುನಾರಚನೆಗೆ ವಿಧೇಯಕ ತರಲು ಕ್ರಮ ವಹಿಸಲಾಗುವುದಾಗಿ ಹಾಗೂ ಮೂಲ ಗೇಣಿದಾರರು, ಕುಮ್ಕಿ ಜಮೀನು, ಖಾನೆ-ಬಾನೆ, ಡೀಮ್ಡ್ ಅರಣ್ಯ ಸಾಗುವಳಿದಾರರ ಸಮಸ್ಯೆಗಳ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿ ರಚನೆ ಮಾಡುವುದಾಗಿ ಪ್ರಕಟಿಸಲಾಗಿದೆ. ಇದರಿಂದ ಉಡುಪಿ ಜಿಲ್ಲೆಗೆ ಪ್ರಯೋಜನವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss