ಹೊಸದಿಗಂತ ಚಿತ್ರದುರ್ಗ:
ವಿಕಲಚೇತನರಿಗೆ ಈಗ ನೀಡಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಗಂಭೀರ ಚಿಂತನೆ ರಾಜ್ಯ ಸರ್ಕಾರದ ಮುಂದಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್, ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮ (ಅಲಿಂಕೋ) ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ಸಿ.ಎಸ್.ಆರ್ ಹಾಗೂ ಅಡಿಪ್ ಯೋಜನೆಯಡಿ ದಿವ್ಯಾಂಗ ವ್ಯಕ್ತಿಗಳಿಗೆ ಉಚಿತ ಸಾಧನ ಮತ್ತು ಸಲಕರಣೆಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರಿಗೆ ಹಲವಾರು ಯೋಜನೆಗಳನ್ನು ಸರ್ಕಾರದ ಮಟ್ಟದಲ್ಲಿ ಜಾರಿ ಮಾಡಲಾಗಿದೆ. ಇದರೊಂದಿಗೆ ಬ್ಯಾಂಕುಗಳು ಸಹ ವಿಕಲಚೇತನರು ಸ್ವ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯಗಳನ್ನು ನೀಡಬೇಕು. ಸ್ವಾತಂತ್ರ್ಯ ನಂತರ ವಿಕಲಚೇತನರನ್ನು ಮುಖ್ಯವಾಹಿನಿಗೆ ತರುವ ಕೆಲಸಕ್ಕೆ ಮಾಜಿ ಪ್ರಧಾನಮಂತ್ರಿ ದಿವಂಗತ ಇಂದಿರಾಗಾಂಧಿ ಓಂಕಾರ ಹಾಕಿದರು. ವಿಕಲಚೇತನರಿಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರ ಒದಗಿಸಿತು. ೧೦೮ ವಿಧದ ವಿಕಲಚೇತನರನ್ನು ಸರ್ಕಾರದಿಂದ ಗುರುತಿಸಲಾಗಿದೆ. ಇವರನ್ನು ಮುಖ್ಯವಾಹಿನಿಗೆ ತರಲು ಸಾರ್ವಜನಿಕರ ಬೆಂಬಲ ಅಗತ್ಯವಾಗಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ೨೦೧೪ ರಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ವಿಕಲಾಂಗರು ಎನ್ನುವ ಪದವನ್ನು ಬದಲಿಸಿ, ದಿವ್ಯಾಂಗರು ಎನ್ನುವ ಪದವನ್ನು ಚಲಾವಣೆಗೆ ತಂದು ವಿಕಲಚೇತನರಿಗೆ ಗೌರವ ಸಲ್ಲಿಸಿ ಸಾಮಾಜಿಕ ಕಳಕಳಿ ಮೆರೆದರು. ಪದ ಬದಲಾವಣೆ ಮಾಡುವ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಹಾಗೂ ಗೌರವದಿಂದ ಬದುಕಲು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ವಿಕಲಚೇತನರನ್ನು ಸಮಾಜದಲ್ಲಿ ಕೀಳಾಗಿ ನೋಡಬಾರದು. ದಿವ್ಯಾಂಗರನ್ನು ಅಪ್ಪಿಕೊಂಡು ಪ್ರಗತಿ ಸಾಧಿಸಬೇಕು.
ಭಾರತ ದೇಶ ದಿವ್ಯಾಂಗರನ್ನು ಹೊರತುಪಡಿಸಿ ಪ್ರಗತಿ ಕಾಣಲು ಸಾಧ್ಯವಿಲ್ಲ. ಇಂದು ಹಲವಾರು ದಿವ್ಯಾಂಗರು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ತಂದು ಕೀರ್ತಿ ಗೌರವ ಹೆಚ್ಚು ಮಾಡಿದ್ದಾರೆ. ಈ ಹಿಂದೆ ದೇಶದಲ್ಲಿ ೭ ರೀತಿಯ ಅಂಗವಿಕಲತೆಯನ್ನು ಗುರುತಿಸಲಾಗುತ್ತಿತ್ತು. ಇದರಿಂದ ಉದ್ಯೋಗ ಹಾಗೂ ಉನ್ನತ ವಿದ್ಯಾಭ್ಯಾಸದಲ್ಲಿ ವಿಕಲಚೇತನರು ಸ್ಥಾನಗಳನ್ನು ಪಡೆಯುವಲ್ಲಿ ತೊಂದರೆಯಾಗುತ್ತಿತ್ತು. ೨೦೧೪ ರಲ್ಲಿ ವಿಕಲಚೇತನರ ಕಾಯ್ದೆಗೆ ತಿದ್ದುಪಡಿ ತಂದು ೨೧ ತರಹದ ಅಂಗವಿಕಲತೆಯನ್ನು ಗುರುತಿಸಲಾಗಿದೆ. ಆಸಿಡ್ ದಾಳಿಗೆ ತುತ್ತಾದವರಿಗೆ ದಿವ್ಯಾಂಗರ ಪಟ್ಟಿ ಸೇರಿಸಿ ಸರ್ಕಾರಿ ಉದ್ಯೋಗದಲ್ಲಿ ಅವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ ಗಣಿ ಕಂಪನಿಗಳು ಸಹ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ವಿಕಲಚೇತನರಿಗೆ ನೆರವು ನೀಡುವಂತೆ ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸಿದ್ದರು. ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷರು ಹಾಗೂ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‌ಪೀರ್, ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತ ರಾಘವೇಂದ್ರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾಧಿಕಾರಿ ವೆಂಕಟೇಶ್.ಟಿ, ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಗಿರೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಎಸ್.ಬಿ.ಐ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಗಜೇಂದ್ರ ಕುಮಾರ್, ಇತರೆ ಶಾಖೆಗಳ ಮುಖ್ಯ ವ್ಯವಸ್ಥಾಪಕರುಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರದ ಅಡಿಪ್ ಯೋಜನೆಯಡಿ ರೂ.೧೧,೬೩,೮೩೮ ಮೊತ್ತದ ೨೬೩ ಸಾಧನ ಸಲಕರಣೆಗಳನ್ನು ೧೪೦ ಫಲಾನುಭವಿಗಳಿಗೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿ.ಎಸ್.ಆರ್ ಅನುದಾನದಡಿ ರೂ.೪೪,೭೨,೧೯೮ ಮೊತ್ತದ ೬೨೨ ಸಾಧನ ಸಲಕರಣೆಗಳನ್ನು ೩೭೨ ಫಲಾನುಭವಿಗಳಿಗೆ ವಿತರಿಸಲಾಯಿತು. ಒಟ್ಟು ೫೧೨ ವಿಕಲಚೇತನ ಫಲಾನುಭವಿಗಳಿಗೆ ರೂ.೫೬,೩೬,೦೩೬ ಮೊತ್ತದ ೮೮೫ ಸಾಧನ ಸಲಕರಣೆಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ೨೩ ಯಾಂತ್ರಿಕೃತ ಸೈಕಲ್, ೩೪ ಟ್ರೈಸೈಕಲ್, ೫೬ ವೀಲ್ ಚೇರ್, ೯೬ ಮೊಣಕೈ ಊರುಗೋಲು, ೬೪ ಕಂಕುಳ ಊರುಗೋಲು, ೬೨ ವಾಕಿಂಗ್ ಸ್ಟಿಕ್, ೬ ರೊಲೇಟರ್ಸ್, ೧೨ ಸಿ.ಪಿ.ವೀಲ್ ಚೇರ್, ೩೭ ಸುಗಮ್ಯ ಕೇನ್ಸ್, ೪೨೬ ಬಿ.ಟಿ.ಇ ಶ್ರವಣ ಸಾಧನ, ೬೫ ಪ್ರಾಸ್ಥೆಸಿಸ್ ಮತ್ತು ಕ್ಯಾಲಿಪರ್ಸ್, ೩ ಸ್ಮಾರ್ಟ್ ಫೋನ್, ೦೧ ಜಾಯ್ ಸ್ಟೀಕ್ ವೀಲ್ ಚೇರ್ ಗಳನ್ನು ದಿವ್ಯಾಂಗರು ಪಡೆದುಕೊಂಡರು.