Sunday, December 3, 2023

Latest Posts

ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲ: ನಳಿನ್ ಕುಮಾರ್ ಕಟೀಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಿವಮೊಗ್ಗದಲ್ಲಿ ಈದ್ ಮೆರವಣಿಕೆ ಸಂದರ್ಭ ಉಂಟಾದ ಗಲಭೆ ಹಿಂದೆ ಮತಾಂಧ ಶಕ್ತಿಗಳ ಕೈವಾಡವಿದೆ. ಶಿವಮೊಗ್ಗ ಸೂಕ್ಷ್ಮ ಜಿಲ್ಲೆಯಾಗಿದ್ದು, ಇಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಸರಕಾರ ಮುನ್ನೆಚ್ಚರಿಕೆ ವಹಿಸದ ಕಾರಣ ಗಲಭೆ ನಡೆದಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆರೋಪಿಸಿದರು.

ಮಂಗಳೂರು ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಿವಮೊಗ್ಗ ಘಟನೆ ಬಗ್ಗೆ ಸರಕಾರ ತಕ್ಷಣ ಸೂಕ್ತ ತನಿಖೆ ನಡೆಸಬೇಕು. ಈ ರೀತಿಯ ಘಟನೆಗಳು ಮರುಕಳಿಸದ ರೀತಿಯಲ್ಲಿ ತನಿಖೆ ಮಾಡಬೇಕು. ಯಾರ್‍ಯಾರು ಈ ಘಟನೆಯಲ್ಲಿ ಭಾಗಿಯಾಗಿದ್ದಾರೋ ಅಂತಹವರನ್ನು ಬಂಸಬೇಕು. ಘಟನೆ ಹಿಂದೆ ಆತಂಕವಾದ, ಭಯೋತ್ಪದನಾ ಚಟುವಟಿಕೆಗಳಿವೇ ಎಂಬುದನ್ನು ಪತ್ತೆಹಚ್ಚಬೇಕು ಎಂದರು.

ಈದ್ ಮಿಲಾದ್ ಮೆರವಣಿಗೆ ಹೆಸರಿನಲ್ಲಿ ಹಿಂದು ಧರ್ಮೀಯರ ಅಂಗಡಿಗಳ ಲೂಟಿ, ಮನೆಗಳಿಗೆ ದಾಳಿ ನಡೆದಿರುವುದು ಖಂಡನೀಯ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಕಾರಕ್ಕೆ ಬಂದ ಮೇಲೆ ಕಾಂಗ್ರೆಸ್‌ನ ವಿಜಯೋತ್ಸವದ ಮೆರವಣಿಗೆಯಲ್ಲಿ ಪಾಕಿಸ್ತಾನದ ಧ್ವಜ ಹಾರಾಡಿದ್ದು, ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿತ್ತು. ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳದಿರುವ ಕಾರಣ ಮತಾಂಧ ಶಕ್ತಿಗಳು ಮತ್ತೆ ಎದ್ದು ನಿಂತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಭಯೋತ್ಪಾದನೆಯ ಚಟುವಟಿಕೆಗಳು ಕಾಣುತ್ತಿವೆ. ಹರ್ಷ ಹತ್ಯೆ, ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಎನ್‌ಐಎ ದಾಳಿ ವೇಳೆ ಅತಿ ಹೆಚ್ಚು ಆತಂಕ ಕಂಡುಬಂದಿರುವುದು ತೀರ್ಥಹಳ್ಳಿಯಲ್ಲಿ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸೋಟ ಸಂದರ್ಭದಲ್ಲೂ ತೀರ್ಥಹಳ್ಳಿಯಲ್ಲಿ ಭಯೋತ್ಪಾದನಾ ಚಟುವಟಿಕೆ ಆರಂಭ ಆಗಿದೆ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಭಟ್ಕಳ ಬ್ರದರ್ಸ್ ಹೆಸರಿನಲ್ಲಿ ಭಟ್ಕಳದಲ್ಲಿ ಭಯೋತ್ಪಾದನಾ ಚಟುವಟಿಕೆ ಆರಂಭವಾಯಿತೋ, ತೀರ್ಥಹಳ್ಳಿ ಬ್ರದರ್ಸ್ ಹೆಸರಿನಲ್ಲಿ ಮತಾಂಧ ಶಕ್ತಿಗಳು ಭಯೋತ್ಪಾದನಾ ಚಟುವಟಿಕೆಗಳನ್ನು ಪ್ರಾರಂಭಿಸಿರುವುದು ಎನ್‌ಐಎ ತನಿಖೆಯಿಂದ ಸ್ಪಷ್ಟವಾಗಿರುವುವುದು ಮಾಧ್ಯಮದಲ್ಲಿ ವರದಿಯಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಗೃಹ ಸಚಿವರು ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಮತಬೇಟಾಗಿ ಇಂತಹ ಭಯೋತ್ಪದನಾ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ. ಹಿಂದೆ ಪ್ರವೀಣ್ ನೆಟ್ಟಾರು, ಹರ್ಷ ಹತ್ಯೆ ಸಂದರ್ಭ ಎನ್‌ಐಎ ತನಿಖೆ ಮೂಲಕ ಕಠಿಣ ಕ್ರಮ ವಹಿಸಲಾಗಿತ್ತು. ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿ ಗಲಾಟೆ ಆ ಸಂದರ್ಭದಲ್ಲಿ ಬಿಜೆಪಿ ಸರಕಾರ ಕಠಿಣ ಕ್ರಮ ವಹಿಸಿದ್ದ ಕಾರಣ ಇಂತಹ ಆತಂಕವಾದ ಹತೋಟಿಗೆ ಬಂದಿತ್ತು ಎಂದು ನಳಿನ್ ಹೇಳಿದರು.

ಪ್ರಸಕ್ತ ರಾಜ್ಯ ಸರಕಾರ ತುಷ್ಟೀಕರಣದ ನೀತಿಯಡಿ ಇಂತಹ ಘಟನೆಗಳಿಗೆ ಅವಕಾಶ ನೀಡುತ್ತಿದೆ. ಕೋಲಾರದಲ್ಲಿ ತಲವಾರು ಘಟನೆ, ಬ್ಯಾನರ್ ಹಾಕುವುದು ಇಂತಹ ಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಫಲ ಆದ ಕಾರಣ ಮತಾಂಧ ಶಕ್ತಿಗಳಿಗೆ ಇನ್ನಷ್ಟು ಶಕ್ತಿ ಬಂದಿದೆ. ಸಮಾಜ ಭಯದಲ್ಲೇ ಬದುಕುವ ಕಾಲ ಬಂದಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!