ಭೂಮಿ, ಆಸ್ತಿ ವ್ಯವಹಾರಕ್ಕೆ ಆಧಾರ್ ಬಳಕೆಗೆ ರಾಜ್ಯ ಸರ್ಕಾರ ಅಸ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಸ್ತಿ ಖರೀದಿದಾರರು ಮತ್ತು ಮಾರಾಟಗಾರರನ್ನು ಗುರುತಿಸಲು ಆಧಾರ್ ಬಳಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಒಬ್ಬರ ಆಸ್ತಿಯನ್ನು ಬೇರೊಬ್ಬರು ಮಾರಾಟ ಮಾಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕಂದಾಯ ಇಲಾಖೆ ಈ ಕ್ರಮವನ್ನು ತಂದಿದೆ.

ಇದುವರೆಗೂ ವಿವಿಧ ಗುರುತಿನ ದಾಖಲೆ ಮತ್ತು ಸಹಿಗಳನ್ನು ಬಳಸಿಕೊಂಡು ಉಪ ನೋಂದಣಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಗುರುತಿನ ಚೀಟಿಗಳ ಆಧಾರದಲ್ಲೇ ಮಾರಾಟಗಾರರು ಮತ್ತು ಖರೀದಿದಾರರನ್ನು ಗುರುತಿಸಲಾಗುತ್ತಿತ್ತು. ಈ ಪ್ರಕ್ರಿಯೆಯಲ್ಲಿ ನೈಜ ಮಾಲೀಕರಲ್ಲದವರು ಮಾರಾಟಗಾರರೆಂದು ಹೇಳಿಕೊಳ್ಳುವ ಅಪಾಯವೂ ಇತ್ತು.

ಕಂದಾಯ ಇಲಾಖೆಯ ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆ, ಭೂಮಿ, ನಗರ ಆಸ್ತಿ ಮಾಲೀಕತ್ವದ ದಾಖಲೆಗಳ ವಿಭಾಗಗಳು ಆಸ್ತಿ ಮಾರಾಟಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ಮಾರಾಟಗಾರರು ಮತ್ತು ಖರೀದಿದಾರರನ್ನು ಗುರುತಿಸಲು ಆಧಾರ್‌ ದತ್ತಾಂಶವನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡಿ ಎಂದು ಮೇ 18ರಂದು ಅಧಿಸೂಚನೆ ಹೊರಡಿಸಲಾಗಿತ್ತು.

ಸ್ಥಿರಾಸ್ಥಿ ನೋಂದಣಿ ಪ್ರಕ್ರಿಯೆಯಲ್ಲಿ ಆಧಾರ್‌ ಬಳಕೆಗೆ ಕೇಂದ್ರ ಸರ್ಕಾರವು ಏಪ್ರಿಲ್‌ನಲ್ಲಿ ಅನುಮತಿ ನೀಡಿತ್ತು. ಇದೀಗ ರಾಜ್ಯ ಸರ್ಕಾರವೂ ಅದೇ ಕ್ರಮ ತೆಗೆದುಕೊಂಡಿದೆ.

‘ಒಬ್ಬರ ಹೆಸರಿನ ಆಸ್ತಿಯನ್ನು ಬೇರೊಬ್ಬರು ಅಕ್ರಮವಾಗಿ ಮಾರಾಟ ಮಾಡುವುದನ್ನು ತಡೆಗಟ್ಟಲು ಆಧಾರ್‌ ಬಳಕೆ ಸಹಕಾರಿಯಾಗಲಿದೆ. ಅಷ್ಟೇ ಅಲ್ಲ, ಒಂದೇ ಸರ್ವೆ ನಂಬರ್‌ನಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಆಸ್ತಿ ಮಾಲೀಕರಿದ್ದರೆ ಅವರನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ’ ಎಂದು ಭೂ ದಾಖಲೆಗಳು ಮತ್ತು ಭೂಮಾಪನ ಇಲಾಖೆ ಆಯುಕ್ತ ಸಿ.ಎನ್‌. ಶ್ರೀಧರ ತಿಳಿಸಿದ್ದಾರೆ.

ನೋಂದಣಿ ಪ್ರಕ್ರಿಯೆಯಲ್ಲಿ ಆಧಾರ್‌ ದತ್ತಾಂಶದ ಬಳಕೆಗೆ ಸರ್ಕಾರ ಅನುಮತಿ ನೀಡಿದ ಬಳಿಕ, ಅದನ್ನು ಅನುಷ್ಠಾನಕ್ಕೆ ತರಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ನೋಂದಣಿ ತಂತ್ರಾಂಶದಲ್ಲಿ ಬದಲಾವಣೆಗಳನ್ನು ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!