Saturday, April 1, 2023

Latest Posts

ರಾಜ್ಯದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ಸಿಎಂ ಕೂಡಲೇ ರಾಜೀನಾಮೆ ನೀಡಬೇಕು : ಸಿದ್ದರಾಮಯ್ಯ

ಹೊಸದಿಗಂತ ವರದಿ ಹುಬ್ಬಳ್ಳಿ:

ಬೆಳಗಾವಿಯ ಗಡಿ ಭಾಗದಲ್ಲಿರುವ ಕರ್ನಾಟಕದ 865 ಗ್ರಾಮಗಳಿಗೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಜಾರಿಗೊಳಿಸಲು ಮುಂದಾದರೂ ಸಹ ಬಿಜೆಪಿ‌ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೌನವಾಗಿದೆ. ಇದರಿಂದ ರಾಜ್ಯದ ಒಕ್ಕೂಟದ ವ್ಯವಸ್ಥೆಗೆ ಧಕ್ಕೆಯಾಗಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ‌ ಸಿದ್ದರಾಮಯ್ಯ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ, ನೆಲ, ಜಲ ರಾಜ್ಯದ ಜನರ ಹಕ್ಕಾಗಿದೆ. ಅದಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ‌ ಸರ್ಕಾರ ಮೌನವಹಿಸಿರುವುದನ್ನು‌ ನೋಡಿದರೆ ಸತ್ತೆ ಹೋಗಿದೆ ಎಂದೆನಿಸುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕ ಏಕೀಕರಣವಾದ ಬಳಿಕ ರಾಜ್ಯದ ಒಂದಿಂಚು ಜಾಗ ಬಿಟ್ಟುಕೊಡಬಾರದು. ಆ ರಾಜ್ಯದವರು ನಮ್ಮ ರಾಜ್ಯದ ಜನರ ಆರೋಗ್ಯ ವಿಮೆ ಜಾರಿಗೊಳಿಸುತ್ತಿರುವುದು ಒಕ್ಕೂಟ ವ್ಯವಸ್ಥೆ ಹಾಳು ಮಾಡಿದಂತೆ. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ತಕ್ಷಣ ಸಮಸ್ಯೆ ಪರಿಹರಿಸಬೇಕು. ಮಹಾರಾಷ್ಟ್ರ ಶಿಂಧೆ ಸರ್ಕಾರ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ರಾಜ್ಯದ ಜನರ‌ ರಕ್ಷಣೆ ಮಾಡುವಲ್ಲಿ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಫಲರಾಗಿದ್ದಾರೆ. ಅವರು ಸಿಎಂ ಆಗಿ ಇರಲು ಯೋಗ್ಯರಲ್ಲ ಎಂದರು.

ಕಾಂಗ್ರೆಸ್ ಆರಂಭಿಸಿದ ಇಂದಿರಾ ಕ್ಯಾಟಿನ್ ಸ್ಥಗಿತ ಮಾಡುತ್ತಿದ್ದಾರೆ. ಇದರಿಂದ ಎಷ್ಟೋ ಬಡ ಜನರ, ಆಟೊ ಚಾಲಕರ, ಗ್ರಾಮೀಣ ಭಾಗದಿಂದ ನಗರಕ್ಕೆ‌ ಬರುವ ಕಾರ್ಮಿಕರಿಗೆ, ಆಸ್ಪತ್ರೆ ಬರುವ ರೋಗಿಗಳಿಗೆ ಆಹಾರ ಸಿಗುತ್ತಿತ್ತು.‌ ರಾಜ್ಯದ ಜನರು ಈ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿ ಸರ್ಕಾರ ಕ್ಯಾಂಟೀನ್ ಮುಚ್ಚಲು‌ ಮುಂದಾಗಿದ್ದು, ಬಡಜನರ ಶಾಪ ಅವರಿಗೆ ತಟ್ಟದೆ ಬಿಡುವುದಿಲ್ಲ ಎಂದರು.

ಪ್ರವಾಹ ಹಾಗೂ ಕೊರೋನಾ ಸಮಯದಲ್ಲಿ ಭಾರದ ಕೇಂದ್ರ ಬಿಜೆಪಿ‌ ನಾಯಕರು ಈಗ ಚುನಾವಣೆ ಪ್ರಚಾರಕ್ಕಾಗಿ ಬರುತ್ತಿದ್ದಾರೆ. ‌ಅಷ್ಟೇ ಅಲ್ಲದೆ ಕಾಂಗ್ರೆಸ್ ಸರ್ಕಾರ ಯೋಜನೆ ರೂಪಿಸಿದ್ದ ಕಂದಾಯ ಗ್ರಾಮದ ಜನರಿಗೆ ಹಕ್ಕು ಪತ್ರ ವಿತರಣೆ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ಹೈವೆ, ಧಾರವಾಡ ಐಐಟಿ ಸ್ಥಾಪನೆ ಮಾಡಿದ್ದು ನಾವೇ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ‌ ಸರ್ಕಾರಕ್ಕೆ ಯಾವುದೇ ಬದ್ಧತೆ ಇಲ್ಲ ಎಂದು ಆರೋಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!