ಬೆಲೆ ಇಳಿಸಲಾಗದಿದ್ದರೆ ಅಧಿಕಾರದಿಂದ ಕೆಳಗಿಳಿಯಿರಿ: ಕೊಡಗು ಬಿಜೆಪಿ ಒತ್ತಾಯ

ಹೊಸದಿಗಂತ ವರದಿ, ಮಡಿಕೇರಿ:

ಜನಸಾಮಾನ್ಯರಿಗೆ ಹೊರೆಯಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸರಕಾರ ತಕ್ಷಣ ಇಳಿಕೆ ಮಾಡಬೇಕು. ಸಾಧ್ಯವಾಗದಿದ್ದಲ್ಲಿ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು’ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುವಂತೆ ಒತ್ತಾಯಿಸಿ ಇತ್ತೀಚೆಗೆ ಬಿಜೆಪಿ ವತಿಯಿಂದ ರಾಜ್ಯವ್ಯಾಪಿ ತೀವ್ರ ಹೋರಾಟವನ್ನು ನಡೆಸಲಾಗಿದೆ. ಆದರೆ ಸರಕಾರ ಇದಕ್ಕೆ ಸ್ಪಂದನೆ ನೀಡದೆ ನಿರ್ಲಕ್ಷ್ಯ ವಹಿಸಿದೆ. ಕಾಂಗ್ರೆಸ್ ಸರಕಾರದ ತಪ್ಪು ನಿರ್ಧಾರದಿಂದಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಆಟೋ, ಟ್ಯಾಕ್ಸಿ ಪ್ರಯಾಣ ದರವೂ ದುಬಾರಿಯಾಗಲಿದೆ. ಜನಸಾಮಾನ್ಯರಿಗೆ ಇದು ದೊಡ್ಡ ಹೊರೆಯಾಗಲಿದೆ ಎಂದು ಟೀಕಿಸಿದರು.

ಜನವಿರೋಧಿ ಸರಕಾರ ಎಲ್ಲಾ ಹಂತದಲ್ಲೂ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಸರಣಿ ಆತ್ಮಹತ್ಯೆ, ಕೊಲೆಗಳು, ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯ ಸಾವಿಗೆ ಭ್ರಷ್ಟ ವ್ಯವಸ್ಥೆಯೇ ಕಾರಣವಾಗಿದೆ. ಈ ಸರಕಾರ ಜನರ ನೆಮ್ಮದಿಯನ್ನು ಕೆಡಿಸಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದೆ. ಆದ್ದರಿಂದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿಯಬೇಕೆಂದು ಎಂದು ರವಿ ಕಾಳಪ್ಪ ಒತ್ತಾಯಿಸಿದರು.

ಇಂದು ಪ್ರತಿಭಟನೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸುವಂತೆ ಒತ್ತಾಯಿಸಿ ಜನಪರ ಕಾಳಜಿಯಿಂದ ವೀರಾಜಪೇಟೆ ಮತ್ತು ಸೋಮವಾರಪೇಟೆಯಲ್ಲಿ ಜೂ.20 ರಂದು ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಗೆ ಸಾರ್ವಜನಿಕರು, ಆಟೋ, ಟ್ಯಾಕ್ಸಿ ಮತ್ತಿತರ ವಾಹನ ಚಾಲಕರುಗಳು ಕೂಡಾ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಎರಡನೇ ಹಂತದ ಪ್ರತಿಭಟನೆಗೂ ಸ್ಪಂದನೆ ದೊರೆಯದಿದ್ದಲ್ಲಿ ಗ್ರಾಮ ಮಟ್ಟದಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕುವಲ್ಲಿಯವರೆಗೆ ಹೋರಾಟವನ್ನು ರೂಪಿಸಲಾಗುವುದು. ಅಲ್ಲದೆ ಬಂದ್’ಗೂ ಕರೆ ನೀಡಲಾಗುವುದು ಎಂದರು.

ಬಿಜೆಪಿಯ ವೀರಾಜಪೇಟೆ ಮಂಡಲದ ಅಧ್ಯಕ್ಷ ಸುವಿನ್ ಗಣಪತಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ರೂ.2 ಸಾವಿರ ನೀಡಿದಂತೆ ಮಾಡಿ ತೆರಿಗೆ ಹೊರೆ ಮತ್ತು ಬೆಲೆ ಏರಿಕೆ ಮೂಲಕ ಮತ್ತೆ ಕಸಿದುಕೊಳ್ಳುತ್ತಿದೆ ಎಂದು ಟೀಕಿಸಿದರು.

ಗುರುವಾರ 10.30 ಗಂಟೆಗೆ ವೀರಾಜಪೇಟೆ ಬಿಜೆಪಿ ಕಚೇರಿಯಿಂದ ಮೆರವಣಿಗೆ ಮೂಲಕ ತೆರಳಿ ಪಟ್ಟಣದ ಮುಖ್ಯ ರಸ್ತೆಗಳನ್ನು ಬಂದ್ ಮಾಡಿ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಗುವುದು. ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದರು.
ಸೋಮವಾರಪೇಟೆ ಮಂಡಲದ ಅಧ್ಯಕ್ಷ ಗೌತಮ್ ಗೌಡ ಮಾತನಾಡಿ ಬೆಳಗ್ಗೆ 10.30 ಗಂಟೆಗೆ ಬಿಜೆಪಿ ಕಚೇರಿಯಿಂದ ಮೆರವಣಿಗೆಯಲ್ಲಿ ಪುಟ್ಟಪ್ಪ ವೃತ್ತಕ್ಕೆ ತೆರಳಿ ಮೂರು ಮುಖ್ಯ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಡಿಕೇರಿ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಹಾಗೂ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!