ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………..
ಹೊಸ ದಿಗಂತ ವರದಿ, ಹಾವೇರಿ:
ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆಗಾಗಿ ಶೇ.50ರ ಪ್ರಮಾಣದಲ್ಲಿ ಕಾಯ್ದಿರಿಸಿದ ಬೆಡ್ಗಳ ಭೌತಿಕ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್ ಸ್ಥಿತಿಗತಿ ಕುರಿತಂತೆ ದೈನಂದಿನ ಪ್ರಗತಿ ಪರಿಶೀಲನೆ ನಡೆಸಿದ ಅವರು ಖಾಸಗಿ ಆಸ್ಪತ್ರೆಯ ಕೋವಿಡ್ ಬೆಡ್ಗಳ ಪರಿಶೀಲನೆಗೆ ವೈದ್ಯಾಧಿಕಾರಿ, ಪರಿಸರ ಅಧಿಕಾರಿ ಹಾಗೂ ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರ ಒಳಗೊಂಡ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಇಂದಿನಿಂದಲೇ ತಪಾಸಣೆ ಆರಂಭಿಸಿ ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿರುವ 145 ಹಾಸಿಗೆ ಸಾಮರ್ಥ್ಯವನ್ನು 198 ಬೆಡ್ಗಳಿಗೆ ಹೆಚ್ಚಿಸುವ ಕೆಲಸನ್ನು ಶುಕ್ರವಾರದೊಳಗೆ ಪೂರ್ಣಗೊಳಿಸಿ. ಗುತ್ತಲ, ಬಂಕಾಪುರ, ಅಕ್ಕಿಆಲೂರು, ಮಾಸೂರು, ರಟ್ಟಿಹಳ್ಳಿ ಆಸ್ಪತ್ರೆಗಳಲ್ಲಿ ಕಳೆದ ಸಾಲಿನಲ್ಲಿ ಕೋವಿಡ್ ಚಿಕಿತ್ಸೆಗಾಗಿ ಬೆಡ್ಗಳ ವ್ಯವಸ್ಥೆ ಹಾಗೂ ಆಕ್ಸಿಜನ್ ಸಂಪರ್ಕ ಕಲ್ಪಿಸಲು ಮ್ಯಾನಿಫೋಲ್ಡ್ ಹಾಗೂ ಪೈಪ್ಲೈನ್ ವ್ಯವಸ್ಥೆ ಸಹ ಮಾಡಲಾಗಿದೆ. ಅಗತ್ಯಕ್ಕನುಸಾರವಾಗಿ ಆಕ್ಸಿಜನ್ ಸಿಲೆಂಡರ್ಗಳನ್ನು ಅಳಡಿಸಿ ಈ ಬೆಡ್ಗಳ ಬಳಕೆಮಾಡಲು ಸಿದ್ದವಾಗಿರಿಸಲು ಸೂಚಿಸಿದರು.
ಆಸ್ಪತ್ರೆವಾರು ರೋಗಿಗಳಿಗೆ ಆಕ್ಸಿಜನ್ ಬಳಕೆ ಪ್ರಮಾಣದ ಮಾಹಿತಿ ಪಡೆದುಕೊಂಡ ಅವರು, ಆಕ್ಸಿಜನ್ ಅತ್ಯಂತ ಮಹತ್ವದ್ದಾಗಿದೆ, ಪೋಲಾಗದಂತೆ ತಡೆಯಬೇಕು. ಆಕ್ಸಿಜನ್ ಪೂರೈಕೆ, ವಾಲ್ಗಳಲ್ಲಿ ಸೋರಿಕೆ, ಬೆಡ್ನಿಂದ ರೋಗಿಗಳು ನಿತ್ಯಕರ್ಮಗಳಿಗೆ ತೆರಳುವಾಗ ಆಕ್ಸಿಜನ್ ಆನ್ ಇರದಂತೆ ಎಚ್ಚರ ವಹಿಸಬೇಕು. ಈ ಕುರಿತು ನಿಗಾವಹಿಸಿ ಎಂದರು.
ಜಿಲ್ಲಾ ಆಸ್ಪತ್ರೆಯಲ್ಲಿ ಆರು ಕೆ.ಎಲ್ ಹಾಗೂ ಗ್ರಾಸೀಂ ಕೈಗಾರಿಕಾ ಘಟಕದಲ್ಲಿ 30 ಕೆ.ಎಲ್ ಸಾಮರ್ಥ್ಯದ ಟ್ಯಾಂಕ್ ಬಳಕೆಮಾಡಿಕೊಳ್ಳುವ ಜೊತೆಗೆ ಬಳ್ಳಾರಿ, ಹರಿಹರ, ಗದಗ ಹಾಗೂ ಧಾರವಾಡ ಏಜನ್ಸಿ ಗಳಿಂದಲೂ ಅಗತ್ಯ ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊಸದಾಗಿ ಒಂದು ಸಾವಿರ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕ ಮಂಜೂರಾಗಿದೆ. ಈ ಘಟಕವನ್ನು ತ್ವರಿತವಾಗಿ ಇನ್ಸ್ಟಾಲೇಷನ್ಗೆ ಕ್ರಮವಹಿಸುವಂತೆ ತಿಳಿಸಿದರು.
ಕಾಲ ಕಾಲಕ್ಕೆ ರೆಮ್ಡಿಸಿವರ್ ದಾಸ್ತಾನು ಮಾಡಿಕೊಳ್ಳಿ ಪ್ರತಿ ದಿನ ಯಾರಿಗೆ ರೆಮ್ಡಿಸಿವರ್ ನೀಡಲಾಗಿದೆ ಎಂಬ ಮಾಹಿತಿಯನ್ನು ರೋಗಿಗಳ ಹೆಸರು ನಮೂದಿಸಿ ವರದಿನೀಡುವಂತೆ ಹೇಳಿದರು.
ಜಿ.ಪಂ ಸಿಇಒ ಮಹಮ್ಮದ ರೋಷನ್ ಮಾತನಾಡಿ, ಜಿಲ್ಲಾ ಆಸ್ಪತ್ರೆ, ರಾಣೇಬೆನ್ನೂರು ಆಸ್ಪತ್ರೆಗಳು ಸೇರಿದಂತೆ ಜಿಲ್ಲೆಯ ಆಕ್ಸಿಜನ್ ಬಳಕೆ ಕುರಿತಂತೆ ತಕ್ಷಣ ಮೌಲ್ಯಮಾಪನ ಆರಂಭಿಸಿ. ಸೋರಿಕೆ ತಡೆ, ತಾಂತ್ರಿಕ ಕಾರಣದಿಂದ ವ್ಯರ್ಥವಾಗಿ ಸೋರಿಕೆ ಆಗುವುದನ್ನು ಸರಿಪಡಿಸಲಾಗುವುದು ಎಂದು ಹೇಳೀದರು.
ಜಿಲ್ಲೆಯಲ್ಲಿ ಈವರೆಗೆ ಮಾಸ್ಕ್ ಧರಿಸದವರಿಂದ 10 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಲಸಿಕೆ ಕಾರ್ಯ ಮುಂದುವರೆದಿದೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದೆ. ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಲಸಿಕೆ ಹಾಕಲು ಆದ್ಯತೆ ನೀಡಲಾಗಿದೆ. ನಾಲ್ಕುಸಾವಿರ ಡೋಸ್ ದಾಸ್ತಾನು ಬಂದಿದೆ.
ಅಪರ ಜಿಲ್ಲಾಧಿಕಾರಿ ವಿನೋದಕುಮಾರ ಹೆಗ್ಗಳಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸ ಡಾ. ಪಿ.ಆರ್.ಹಾವನೂರ, ಪರಿಸರ ಅಧಿಕಾರಿ ಮಹೇಶ್ವರಪ್ಪ, ಸಹಾಯಕ ಔಷಧ ನಿಯಂತ್ರಕಿ ನೀಲಿಮಾ, ಕುಟುಂಬ ಕಲ್ಯಾಣಾಧಿಕಾರಿ ಡಾ. ದೇವರಾಜ್ ಇತರರು ಉಪಸ್ಥಿತರಿದ್ದರು.