ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಯಾವುದೇ ಸಭೆ, ಸಮಾರಂಭ, ಶುಭ ಕೆಲಸಕ್ಕೂ ಮೊದಲು ನೆನೆಯುವುದು ವಿಘ್ನ ನಿವಾರಕ ಗಣಪನನ್ನು. ಗಣಪತಿಯ ಸ್ತೋತ್ರವಿಲ್ಲದೆ ಯಾವ ಶುಭ ಸಮಾರಂಭವೂ ಮುನ್ನಡೆಯದು. ಗಣೇಶ ಚತುರ್ಥಿಯ ಶುಭದಿನದಂದು ಗಣೇಶನ ಬಗ್ಗೆ ಸ್ವಾರಸ್ಯಕರ ಕಥೆಗಳನ್ನು ಮೆಲುಕು ಹಾಕೋಣ ಬನ್ನಿ.
ಏಕದಂತ ಎನ್ನುವ ಹೆಸರಿನ ಹಿಂದಿದೆ ಸ್ವಾರಸ್ಯಕರ ಕಥೆ..
ಗಣಪನಿಗೆ ಏಕದಂತ ಎನ್ನುವ ಹೆಸರಿದೆ. ಇದಷ್ಟೆ ಅಲ್ಲ, ನೂರಾರು ಹೆಸರುಗಳಿಂದ ದೇವರನ್ನು ಕರೆಯಲಾಗುತ್ತದೆ. ಏಕದಂತ ಎಂದು ಕರೆಯುವುದರ ಹಿಂದಿನ ಸ್ವಾರಸ್ಯಕರ ಕಥೆ ಇಲ್ಲಿದೆ…
ಪುರಾಣದ ಪ್ರಕಾರ ಗಣೇಶನು ಮಹಾಭಾರತ ಬರೆದಿದ್ದಾನೆ. ಮಹಾರಾಭಾರತ ಬರೆಯುವ ವೇಳೆ ಕೈಯಲ್ಲಿ ಪುಕ್ಕ ಹಿಡಿದು, ಅದರ ತುದಿಯಿಂದ ಮಹಾಭಾರತವನ್ನು ಬರೆಯಲಾಗಿತ್ತು. ಒಂದೇ ಸಮನೆ ಕಥೆಯಲ್ಲಿ ಮಗ್ನರಾಗಿ ಬರೆಯುತ್ತಿದ್ದ ಗಣೇಶನ ಪುಕ್ಕ ಮುರಿದು ಹೋಗಿತ್ತು. ಇದೀಗ ಮತ್ತೊಂದನ್ನು ಹುಡುಕಿ ತಂದು ಬರೆಯುವುದು ತಡವಾದೀತು ಎನ್ನುವ ಕಾರಣಕ್ಕೆ ಜೊತೆಗೆ ಮತ್ತೆ ಪುಕ್ಕ ಮುರಿದುಹೋಗಬಹುದು ಎನ್ನುವ ಕಾರಣಕ್ಕಾಗಿ ಗಣೇಶ ತನ್ನ ದಂತವನ್ನೇ ಮುರಿದು ಅದರಿಂದಲೇ ಬರವಣಿಗೆ ಮುಂದುವರಿಸಿದ.
ಕಥೆ ಒಂದೆಡೆ ಇರಲಿ. ಹೀಗೆ ತೊಡಗಿಕೊಂಡ ಕಾರ್ಯದಲ್ಲಿ ಅನುಪಮವಾದ ಶ್ರದ್ಧೆ ನಾವೆಲ್ಲ ರೂಢಿಸಿಕೊಳ್ಳಬೇಕಾದ ಗುಣ ಅಲ್ಲವೇ?
ಇಲಿ ಗಣಪನ ವಾಹನವಾದದ್ದು ಹೇಗೆ?
ಎಲ್ಲರಿಗೂ ಗೊತ್ತಿರುವಂತೆ ಗಣೇಶನ ವಾಹನ ಇಲಿ. ಈ ಪುಟ್ಟ ಜೀವ ಗಣೇಶನ ವಾಹನ ಆಗಿದ್ದು ಹೀಗೆ..
ಹಿಂದಿನ ಕಾಲದಲ್ಲಿ ಇಲಿಗಳಿಂದ ಜನ ಬಹಳ ತೊಂದರೆ ಅನುಭವಿಸುತ್ತಿದ್ದರು. ಕೃಷಿ ಜನರ ಮೂಲಕಸುಬಾಗಿತ್ತು. ಫಸಲುಗಳನ್ನು ಹಾಳುಮಾಡುವುದು, ಮನೆಯಲ್ಲಿಟ್ಟಿದ್ದ ಧಾನ್ಯಗಳನ್ನು ತಿನ್ನುವುದು ಇಲಿ ಕೆಲಸವಾಗಿತ್ತು. ಜನರೆಲ್ಲ ಒಗ್ಗಟ್ಟಾಗಿ ಗಣೇಶನ ಮೊರೆ ಹೋಗಿದ್ದಕ್ಕೆ ಗಣೇಶ ಎಲ್ಲ ಇಲಿಗಳನ್ನು ಗೆದ್ದನೆಂಬಂತೆ ಇಲಿಯನ್ನು ತನ್ನ ವಾಹನ ಮಾಡಿಕೊಂಡ. ಇನ್ನೊಂದು ಕಥೆಯಲ್ಲಿ ಗಣೇಶ ಯಾರಿಗೆ ಕಷ್ಟ ಎಂದರೆ ಅಲ್ಲಿಗೆ ಕ್ಷಣಮಾತ್ರದಲ್ಲಿ ತಲುಪುತ್ತಾನೆ. ಇಲಿ ಚಿಕ್ಕಪ್ರಾಣಿಯಾದ್ದರಿಂದ ಎಲ್ಲ ಜಾಗಕ್ಕೂ ಸುಲಭವಾಗಿ ತಲುಪುತ್ತಿತ್ತು ಎಂದೂ ಅರ್ಥೈಸುತ್ತಾರೆ.