ಜೀವದ ಹಂಗು ತೊರೆದು ಹೋರಾಡಿ ʼಪರಮವೀರʼನೆನಿಸಿದ ಕನ್ನಡದ ವೀರಯೋಧನಗಾಥೆ..

-ಗಣೇಶ ಭಟ್‌, ಗೋಪಿನಮರಿ

ಕಾಶ್ಮೀರವನ್ನು ಆಕ್ರಮಿಸಿಕೊಳ್ಳುವ ಉದ್ದೇಶದಿಂದ ದೇಶದಿಂದ ವಿಭಜನೆಗೊಂಡ ಜಿನ್ನಾನ ಪಾಕಿಸ್ತಾನವು ಅಕ್ಟೋಬರ್‌ 1947ರಲ್ಲಿ ಕಾಶ್ಮೀರದ ಮೇಲೆ ದಾಳಿ ನಡೆಸಿತು. ಕಾಶ್ಮೀರದ ರಾಜನಾಗಿದ್ದ ಹರಿಸಿಂಗ್‌ ಸಹಯಕ್ಕಾಗಿ ಭಾರತದ ಬಳಿ ಮೊರೆಯಿಟ್ಟಿದ್ದ. ಭಾರತೀಯ ಸೇನೆ ತಕ್ಷಣವೇ ಕಾಶ್ಮೀರಕ್ಕೆ ಧಾವಿಸಿತು. ಪಾಕಿಸ್ತಾನಿ ಸೈನಿಕರ ವಿರುದ್ಧ ಸೆಣೆಸಾಟಕ್ಕೆ ನಿಂತು ಕಾಶ್ಮೀರದ ರಕ್ಷಣೆಗೆ ಮುಂದಾಯಿತು. ಸ್ವತಂತ್ರ ಭಾರತದ ಮೊದಲ ಯುದ್ಧ ನಮ್ಮದೇ ದಾಯಾದಿಗಳ ವಿರುದ್ಧ ನಡೆಯಿತು.

ಅಕ್ಟೋಬರ್‌ 1947ರಲ್ಲಿ ಆರಂಭವಾದ ಈ ಯುದ್ಧ ಏಳನೇ ತಿಂಗಳಿಗೆ ಪ್ರವೇಶಿಸಿತ್ತು. ಅದು 1948, ಏಪ್ರಿಲ್‌ 8ರ ದಿನ. ಶತ್ರು ಸೈನಿಕರು ಕಾಶ್ಮೀರದ ರಜೌರಿಯನ್ನು ಆಕ್ರಮಿಸಿಕೊಂಡಿದ್ದರು. ಆ ಪ್ರದೇಶವನ್ನು ಶತ್ರುವಿನ ಕೈಯಿಂದ ಬಿಡಿಸಲೇ ಬೇಕಿತ್ತು. ಆದರೆ ನೌಶೇರಾದಿಂದ ರಜೌರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಶತ್ರುಗಳು ನೆಲಬಾಂಬುಗಳನ್ನಿಟ್ಟಿದ್ದರು. ನಮ್ಮ ಸೈನ್ಯ ರಜೌರಿಗೆ ಹೋಗಬೇಕೆಂದರೆ ಈ ನೆಲಬಾಂಬುಗಳನ್ನು ತೆರವುಗೊಳಿಸಿಕೊಂಡೇ ಹೋಗಬೇಕಿತ್ತು. ಅಕಸ್ಮಾತ್‌ ನೆಲಬಾಂಬ್‌ ಸ್ಫೋಟಿಸಿದರೆ ನಮ್ಮ ಸೈನಿಕರ ಹೆಣ ಛಿದ್ರ ಛಿದ್ರವಾಗಿ ಬೀಳುತ್ತಿತ್ತು. ಆಗ ನೆಲಬಾಂಬನ್ನು ನಿಷ್ಕ್ರಿಯ ಗೊಳಿಸುವ ಮೂಲಕ ಸೇನೆಯನ್ನು ಕಾಪಾಡಿದ ವೀರನೇ ʼಮೇಜರ್.‌ ರಾಮಾ ರಾಘೋಬ ರಾಣೆʼ. ಶತ್ರುಗಳು ನೆಲದಡಿಯಲ್ಲಿ ಹೂತಿಟ್ಟಿದ್ದ ಮೈನುಗಳನ್ನು ನೆಲಗಡಲೆ ಕಿತ್ತಂತೆ ವೇಗವಾಗಿ ತೆರವುಗೊಳಿಸಿ ಸೇನೆಯನ್ನು ಕಾಪಾಡಿದ ಕನ್ನಡಾಂಬೆಯ ಧೀರ ಪುತ್ರನೀತ.

ಹುಟ್ಟಿದ್ದು 1918ರ ಜೂನ್‌ 26ರಂದು ಕರ್ನಾಟಕದ ಕರಾವಳಿ ಕಾರವಾರ ಜಿಲ್ಲೆಯ (ಇಂದಿನ ಉತ್ತರಕನ್ನಡ) ʼಚೆಂಡಿಯಾʼ ಗ್ರಾಮದಲ್ಲಿ. ರಾಮನ ತಂದೆಯ ಕೆಲಸದಲ್ಲಿ ವರ್ಗಾವಣೆಯಾಗುತ್ತಿದ್ದುದರಿಂದ ದೇಶದ ಬೇರೆ ಬೇರೆ ಭಾಗದಲ್ಲಿ ಶಿಕ್ಷಣ ಮುಗಿಸಿ 22ನೇ ವಯಸ್ಸಿನಲ್ಲಿರುವಾಗ 1940ರ ಜುಲೈ ನಲ್ಲಿ ಭಾರತೀಯ ಸೇನೆಗೆ ಸೇರಿ ಬಾಂಬೆ ಸಪ್ಪರ್ಸ್‌ ರೆಜಿಮೆಂಟಿನ ಭಾಗವಾಗಿ ನೇಮಕಗೊಳ್ಳುತ್ತಾನೆ. ಅದು ಎರಡನೇ ವಿಶ್ವ ಯುದ್ಧದ ಸಮಯವಾಗಿದ್ದರಿಂದ ಬ್ರಿಟೀಶರ ಆಡಳಿತದ ಭಾಗವಾಗಿದ್ದ ಭಾರತೀಯ ಸೇನೆಯೂ ಭಾಗವಹಿಸಿತ್ತು. ಆ ಸಮಯದಲ್ಲಿ ಬರ್ಮಾ ಭಾಗದಲ್ಲಿ ಕಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ರಾಮಾ ರಾಘೋಬ ರಾಣೆ ಭಾರತ ಸ್ವತಂತ್ರಗೊಂಡ ಮೇಲೆ ಭಾರತೀಯ ಸೇನೆಯ ಭಾಗವಾಗಿ ಸೇವೆ ಮುಂದುವರೆಸಿದ.

1948ರ ಕಾಶ್ಮೀರ ಯುದ್ಧದ ಸಂದರ್ಭದಲ್ಲಿ ಸೆಕೆಂಡ್‌ ಲೆಫ್ಟಿನೆಂಟ್‌ ಹುದ್ದೆಗೆ ಭಡ್ತಿ ಪಡೆದ ರಾಮಾ ಇದ್ದ 37ನೇ ಬಾಂಬೇ ಸಪ್ಪರ್ಸ್‌ ತುಕಡಿಯು ಕಾಶ್ಮೀರದಲ್ಲಿ ನಿಯೋಜನೆಗೊಂಡಿತ್ತು. ಇವರದ್ದು ಇಂಜಿನಿಯರಿಂಗ್‌ ರೆಜಿಮೆಂಟ್‌ ಆಗಿದ್ದರಿಂದ ದಾಳಿ ಮಾಡುವ ಕಾಲಾಳು ದಳಗಳಿಗೆ ಅಗತ್ಯ ರಸ್ತೆಗಳ ನಿರ್ಮಾಣ, ಸೌಕರ್ಯಗಳ ನಿಯೋಜನೆ, ಮೈನ್ ತೆರವುಗೊಳಿಸುವುದು, ರಸ್ತೆತೆರವು ಕಾರ್ಯ ಇತ್ಯಾದಿಗಳು ಇವರ ಕೆಲಸವಾಗಿತ್ತು. ಮೇ 1948ರ ಹೊತ್ತಿಗೆ ಕಾಶ್ಮೀರ ಪ್ರಮುಖ ಪ್ರದೇಶ ರಜೌರಿಯನ್ನು ವಶಪಡಿಸಿಕೊಂಡ ಶತ್ರು ಸೈನ್ಯವು ಅಲ್ಲಿ ಭಯಾನಕ ಲೂಟಿ, ಹತ್ಯೆಗಳನ್ನು ನಡೆಸಿತ್ತು. ರಜೌರಿಯಿಂದ ಶತ್ರುವನ್ನು ಹಿಮ್ಮೆಟ್ಟಿಸಲು ಸೇನೆ ಮುಂದಾಯಿತು. ಆದರೆ ನೌಶೇರಾದಿಂದ ರಜೌರಿಗೆ ತೆರಳಬೇಕಿದ್ದ ಮಾರ್ಗದಲ್ಲಿ ಶತ್ರು ಮೈನ್‌ ಗಳಿದ್ದವು. 26 ಮೈಲಿಯುದ್ಧದ ಈ ರಸ್ತೆಯಲ್ಲಿನ ಮೈನ್‌ ಗಳನ್ನು ತೆರವುಗೊಳಿಸುವ ಕಾರ್ಯವನ್ನು ಸೆಕೆಂಡ್‌ ಲೆಫ್ಟಿನೆಂಟ್‌. ರಾಮಾ ರಾಘೋಬ ರಾಣೆ ಹೆಗಲಿಗೆ ಹಾಕಲಾಯಿತು.

ಮೈನ್‌ಗಳನ್ನು ತೆರವುಗೊಳಿಸುವುದೆಂದರೆ ಸುಲಭದ ಮಾತಲ್ಲ. ಆಗ ಈಗಿನಂತೆ ತಂತ್ರಜ್ಞಾನಗಳು ಇಷ್ಟೊಂದು ಮುಂದುವರೆದಿರಲಿಲ್ಲ. ಸೀಮಿತ ಸಾಮಗ್ರಿಗಳೊಂದಿಗೆ ನೆಲದಲ್ಲಿ ಹೂತಿಟ್ಟ ಮೈನ್‌ಗಳನ್ನು ಪತ್ತೆಹಚ್ಚಿ ಅವುಗಳನ್ನು ನಿಷ್ಕ್ರಿಯಗೊಳಿಸಬೇಕು. ಒಂಚೂರು ಹೆಚ್ಚುಕಡಿಮೆಯಾದರೆ ಕ್ಷಣಾರ್ಧದಲ್ಲಿ ದೇಹ ಛಿದ್ರವಾಗಿರುತ್ತದೆ. ಅತ್ಯಂತ ಎಚ್ಚರಿಕೆಯಿಂದ ನಾಜೂಕಾಗಿ ಮಾಡಬೇಕು. ಸಮಯವನ್ನು ವ್ಯರ್ಥಮಾಡುವಂತೆಯೂ ಇಲ್ಲ. ತೆರವು ವೇಗವಾದಷ್ಟು ಸೇನೆಯ ವೇಗ ಹೆಚ್ಚುತ್ತದೆ. ತಡವಾದರೆ ಶತ್ರು ಮತ್ತಷ್ಟು ಬಲಗೊಳ್ಳುತ್ತಾನೆ. ರಾಮಾ ರಾಘೋಬ ರಾಣೆ ತನ್ನ ಸಹಚರರೊಂದಿಗೆ ಬಾಂಬ್‌ ತೆರವಿಗೆ ಮುಂದಾದರು. ಆದರೆ ಶತ್ರು ದಾಳಿ ನಡೆಯುತ್ತಿತ್ತು. ಕಾರ್ಯಾಚರಣೆ ಪ್ರದೇಶ ಗುಡ್ಡಗಾಡಿನ ದುರ್ಗಮ ಪ್ರದೇಶವಾಗಿತ್ತು.

ಒಂದು ಕಡೆ ಶತ್ರುಗಳ ಗುಂಡು ತಪ್ಪಿಸಿಕೊಳ್ಳುತ್ತ ಇನ್ನೊಂದು ಕಡೆ ಎಚ್ಚರಿಕೆಯಿಂದ ಪತ್ತೆ ಹಚ್ಚಿ ತೆರವುಗೊಳಿಸಬೇಕು. ಇದು ಅತ್ಯಂತ ಕಠಿಣವಾಗಿತ್ತು. ಶತ್ರುವಿನ ಗುಂಡಿನಿಂದ ತಪ್ಪಿಸಿಕೊಳ್ಳಲು ಯುದ್ಧ ಟ್ಯಾಂಕ್‌ ಗಳನ್ನೇ ಅಡ್ಡಲಾಗಿಟ್ಟುಕೊಳ್ಳುತ್ತ ರಾಮಾ ಮತ್ತವನ ಸೈನಿಕರು ಮುಂದುವರೆದರು. ತುಕಡಿಯ ಇಬ್ಬರು ಸೈನಿಕರು ಶತ್ರುದಾಳಿಗೆ ವೀರಮರಣವನ್ನಪ್ಪಿದರು. ಸ್ವತಃ ರಾಣೆ ಗಾಯಗೊಂಡ. ಆದರೂ ಎದೆಗುಂದದೆ ಶತ್ರುಗಳ ದಾಳಿಯ ಮಧ್ಯೆಯೇ ಹುಗಿದಿಟ್ಟ ಸ್ಪೋಟಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಸತತ ಮೂರು ದಿನಗಳ ಕಾಲ ಮುಂದುವರೆಸಿ ಸೇನೆಯನ್ನು ರಜೌರಿಗೆ ತಲುಪಿಸಿಯೇ ಬಿಟ್ಟರು. ಅವರು ತೋರಿದ ಈ ಅಪ್ರತಿಮ ಧೈರ್ಯದಿಂದಾಗಿ ಸೇನೆ ರಜೌರಿಯಲ್ಲಿ ಶತ್ರುವನ್ನು ಮಣಿಸಲು ಸಾಧ್ಯವಾಯಿತು.

ಜೀವದ ಹಂಗುತೊರೆದು ಅಪ್ರತಿಮ ಸಾಹಸ ತೋರಿದ ಅವರಿಗೆ ಸೇನೆಯು ಯುದ್ಧದ ನಂತರ ಪರಮೋಚ್ಛ ಗೌರವ ‘ಪರಮವೀರ ಚಕ್ರʼವನ್ನು ನೀಡಿ ಗೌರವಿಸಿತು. ಯುದ್ಧದ ನಂತರವೂ 1968 ರವರೆಗೆ ರಾಣೆ ಭಾರತೀಯ ಸೇನೆಯ ಭಾಗವಾಗಿ ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಅವಧಿಯಲ್ಲಿ ಪರಮ ವೀರ ಚಕ್ರದ ಹೊರತಾಗಿಯೂ ಅವರಿಗೆ ಐದು ಬಾರಿ ಶ್ಲಾಘನಾ ಪತ್ರ (ಮೆನ್ಷನ್ ಇನ್ ಡಿಸ್ಪ್ಯಾಚ್) ನೀಡಲಾಯಿತು. ಅವರ ಕಾರ್ಯತತ್ಪರತೆಗೆ ಹಿಡಿದ ಕೈ ಗನ್ನಡಿ. 1994ರ ಜುಲೈ 10ರಂದು ವಯೋಸಹಜ ಕಾರಣಗಳಿಂದ ರಾಣೆ ಕೊನೆಯುಸಿರೆಳೆದರು. ಬದುಕಿದ್ದಾಗಲೇ ʼಪರಮವೀರ ಚಕ್ರʼ ಪಡೆದ ಕನ್ನಡದ ಏಕೈಕ ವೀರ ಯೋಧನೆಂದರೆ ಅದು ʼರಾಮಾ ರಾಘೋಬ ರಾಣೆʼ.

ಇವರ ಸ್ಮರಣಾರ್ಥ ಕಾರವಾರದಲ್ಲಿ ಪುತ್ಥಳಿ ಸ್ಥಾಪಿಸಿ ಗೌರವಿಸಲಾಗಿದೆ. ಇತ್ತೀಚೆಗಷ್ಟೇ ಅಂಡಮಾನಿನ ದ್ವೀಪವೊಂದಕ್ಕೆ ಇವರ ಹೆಸರನ್ನಿಟ್ಟು ಗೌರವ ಸಲ್ಲಿಸಲಾಗಿದೆ. ಅವರ ಈ ದೇಶ ಸೇವಾ ಮನೋಭಾವ ನಮ್ಮೆಲ್ಲರನ್ನೂ ಅನುದಿನವೂ ಪ್ರೇರೇಪಿಸುವಂತಾಗಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!