ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………….
ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಭಾರೀ ಮಳೆಯಿಂದಾಗಿ ನಾಲೆಯೊಂದು ಒಡೆದು ಜಲಾವೃತಗೊಂಡ ಮನೆಯೊಂದರಲ್ಲಿ ಸಿಕ್ಕಿಕೊಂಡಿದ್ದ 4 ತಿಂಗಳ ಮಗು ಸೇರಿ 9 ಜನರನ್ನು ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಎನ್.ಆರ್ ಪುರ: ತಾಲ್ಲೂಕಿನ ಕಡಹಿನಬೈಲು ಗ್ರಾ.ಪಂ. ಆಲಂದೂರು ಗ್ರಾಮದ ಮಂಗಳ, ಶೇಖರ, ಲಲಿತಾ, ಚಂದ್ರಿಕಾ, ವಿಷ್ಣು ಗೀತಾ, ಶೇಖರ್ ಎಂಬುವವರು ನೀರಿನಿಂದಾವೃತವಾದ ಮನೆಯಲ್ಲಿ ಸಿಕ್ಕಿಕೊಂಡಿದ್ದರು. ಇವರೊಂದಿಗೆ 4 ತಿಂಗಳ ಶಿಶು ಸಹ ಇತ್ತು.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಕೊಪ್ಪ ಠಾಣೆಯ ಸಬ್ಇನ್ಸ್ಪೆಕ್ಟರ್ ವಿ.ಟಿ.ದಿಲೀಪ್ಕುಮಾರ್ ಅಗ್ನಿ ಶಾಮಕದಳವರಿಗೆ ಸುದ್ದಿ ಮುಟ್ಟಿಸಿದರು. ಕೂಡಲೇ ಅವರು ಸ್ಥಳಕ್ಕೆ ಆಗಮಿಸಿದ್ದರು. ಆದರೆ. ಮನೆಯ ಸುತ್ತಲೂ ಜಲಾವೃತಗೊಂಡಿದ್ದರಿಂದ ಹಾಗೂ ಮರಗಳು ಅಡ್ಡಾದಿಡ್ಡಿ ಇದ್ದರಿಂದ ಮತ್ತು ನೀರು ಬಾರೀ ರಭಸವಾಗಿ ಹರಿಯುತ್ತಿದ್ದ ಕಾರಣ ಉಕ್ಕುಡದಲ್ಲಿ ರಕ್ಷಿಸಲು ಸಾಧ್ಯವಾಗಿಲ್ಲ.
ಎಸ್ಐ ವಿ.ಟಿ.ದಿಲೀಪ್ಕುಮಾರ್ ಅವರ ಸೂಚನೆ ಮೇರೆಗೆ ಅಲ್ಲೇ ಇದ್ದ ದೊಡ್ಡ ಮರವೊಂದನ್ನು ಕತ್ತರಿಸಿ ನೆಲಕ್ಕುರುಳಿಸಿ ಅದಕ್ಕೆ ಹಗ್ಗ ಕಟ್ಟಿಕೊಂಡು ಪೊಲೀಸ್, ಅಗ್ನಿಶಾಮಕ ಹಾಗು ಅರಣ್ಯ ಸಿಬ್ಬಂದಿಗಳು ಮನೆಯ ಬಳಿ ತೆರಳಿ ಅಪಾಯದಲ್ಲಿದ್ದ ಕುಟುಂಬವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಈ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕರಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಗ್ರಾ.ಪಂ. ಪಿಡಿಓ ಎ.ಬಿ.ಮಂಜುನಾಥ್, ಕಂದಾಯ ನಿರೀಕ್ಷಕ ನಾಗೇಶ್, ಗ್ರಾಮ ಲೆಕ್ಕಿಗರು ಮತ್ತು ಸಿಬ್ಬಂಧಿಗಳು ರಕ್ಷಣಾ ತಂಡದೊಂದಿಗೆ ಕೈಜೋಡಿಸಿದರು.