ಕೋಮು ಗಲಭೆ ಮಾಡಿದವರ ಮೇಲೆ ಯಾವುದೇ ಮುಲ್ಲಾಜಿಲ್ಲದೆ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೋಮು ಗಲಭೆ ಮಾಡಿದವರ ಮೇಲೆ ಯಾವುದೇ ಮುಲ್ಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಗಲಭೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಭಂಗ ತರುವ ಪ್ರಕರಣಗಳನ್ನು ನಿಯಂತ್ರಿಸಲಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕೋಮುಗಲಭೆ ಹೆಚ್ಚು ಎಂಬ ವಿಪಕ್ಷಗಳ ಆರೋಪ ಕುರಿತು ಪ್ರತಿಯಿಸಿದ ಅವರು, ಅವರಿಗೆ ಆರೋಪ ಮಾಡೋದು ಬಿಟ್ಟು ಬೇರೇನು ಕೆಲಸ ಇದೆ? ಆರೋಪ ಮಾಡೋದೆ ಅವರ ಕೆಲಸ. ಆರೋಪ ಸತ್ಯ ಅಲ್ಲ, ಎಲ್ಲ ಸುಳ್ಳು ಆರೋಪಗಳು. ಎಲ್ಲಿ ಕೋಮು ಗಲಭೆ ಆಗಿದೆ ಎಂದು ಪ್ರಶ್ನಿಸಿದರು.

ಶಿವಮೊಗ್ಗದಲ್ಲಿ ಯಾರೋ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಅವರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಕೋಮುಗಲಭೆಯನ್ನು ತಕ್ಷಣ ಹತ್ತಿಕ್ಕುವ ಕೆಲಸ ಮಾಡುತ್ತೇವೆ. ಯಾರೇ ಕೋಮುಗಲಭೆ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.

ನಮ್ಮ ಸರ್ಕಾರದಲ್ಲಿ ಯಾವ ಸಮುದಾಯದವರಿಗೂ ಅನ್ಯಾಯವಾಗಿಲ್ಲ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿದ್ದಾರೆ. ಆದರೆ ನಾವು ಎಲ್ಲ ಸಮುದಾಯದವರಿಗೆ ನ್ಯಾಯ ದೊರೆಕಿಸಿಕೊಟ್ಟಿದ್ದೇವೆ. ನಮ್ಮ ಸರ್ಕಾರ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಸರ್ಕಾರ ಎಂದ ಅವರು, ಶಾಮನೂರು ಶಿವಶಂಕರಪ್ಪ ಜೊತೆ ನಾನು ಮಾತನಾಡುತ್ತೇನೆ ಎಂದರು.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ ಪತ್ರ ಬರೆದಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಪ್ರಕರಣಗಳನ್ನು ಹಿಂದೆ ಪಡೆಯುವ ಯಾವುದೆ ಪ್ರಸ್ತಾವ ನಮ್ಮ ಮುಂದೆ ಇಲ್ಲ. ವಕೀಲರು, ಹೋರಾಟಗಾರರು ಡಿಕೆಶಿಗೆ ಒಂದು ಪತ್ರ ಬರೆದಿದ್ದರು. ಅದರ ಮೇಲೆ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆ ಪತ್ರವನ್ನು ನಾನು ಇವತ್ತೆ ನೋಡಿದ್ದು. ಪ್ರಕರಣ ಹಿಂಪಡೆಯುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!