ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಮೈಸೂರು:
ಕೊಡಗು ಹಾಗೂ ಕೇರಳದ ವೈನಾಡು ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ನೆರೆ ಹಾವಳಿ ಉಂಟಾದರೂ ಯಾವುದೇ ತೊಂದರೆಯಾಗದoತೆ ನೋಡಿಕೊಳ್ಳಲು ಕ್ರಮವಹಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಹಾಗೂ ವೈನಾಡು ಜಿಲ್ಲಾಡಳಿತದೊಂದಿಗೆ ನಿರಂತರವಾಗಿ ಸತತ ಸಂಪರ್ಕದಲ್ಲಿದ್ದೇವೆ. ಜಿಲ್ಲೆಯ ನೀರಾವರಿ ಇಲಾಖೆ ಅಧಿಕಾರಿಗಳು ಕೊಡಗು, ವಯನಾಡಿನ ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಪ್ರತಿನಿತ್ಯ ಸಂಪರ್ಕ ಸಾಧಿಸಲಿದ್ದಾರೆ. ಜಲಾಶಯಗಳಿಂದ ನೀರನ್ನು ಹಂತ ಹಂತವಾಗಿ ಬಿಡುಗಡೆ ಮಾಡಿದರೆ ನೆರೆ ಹಾವಳಿ ತಪ್ಪಿಸಬಹುದು ಎಂದು ಹೇಳಿದರು. ಕಬಿನಿ ನದಿ ಭಾಗದಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೆರೆಗಳಿಗೆ ನೀರು ತುಂಬಿಸಲು 1 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ಮುಂದಿನ ದಿನಗಳಲ್ಲಿ ನಾಲೆಗಳಿಗೆ ನೀರು ಹರಿಸಲು ಹರಿದು ಬಿಡಲಾಗುವುದು. ಜಲಾಶಯ ಭರ್ತಿಯಾದರೆ ನದಿಗೆ ನೀರು ಬಿಡುತ್ತೇವೆ ಎಂದು ಹೇಳಿದರು.
ಕೊರೋನಾ 3ನೇ ಅಲೆಯನ್ನು ತಡೆಯಲು ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆದಿದೆ. ಮೂರನೇ ಅಲೆಯನ್ನು ಎದುರಿಸಲು ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜತೆ ಸಭೆ ನಡೆಸಿದ್ದೇವೆ.ಪೀಡಿಯಾಟ್ರಿಕ್ ವಾರ್ಡುಗಳನ್ನು ಸಿದ್ಧತೆ ಮಾಡುವುದು ಸೇರಿ ಇನ್ನಿತರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡುವಿಕೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಪಾಸಿಟಿವಿಟಿ ರೇಟ್ ಶೇ.2ರಷ್ಟು ಇದ್ದರೂ ಸೋಂಕು ಹರಡುವಿಕೆ ಸಂಪೂರ್ಣ ನಿಯಂತ್ರಣಕ್ಕೆ ಬರುವುದು ಅನಿವಾರ್ಯ
ಹಾಗಾಗಿ ಸಾರ್ವಜನಿಕರು ಗುಂಪುಗೂಡುವುದನ್ನು ನಿಲ್ಲಿಸಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು. ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುವ ತನಕ ಕೊರೋನಾ ನಿಯಮಗಳನ್ನು ಪಾಲಿಸಬೇಕು ಎಂದರು.