ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ, ಮಡಿಕೇರಿ:
ಯುವ ಸಾಹಿತಿಗಳು ಸದೃಢ ಸಮಾಜಕ್ಕೆ ಪೂರಕವಾದ ಸಾಹಿತ್ಯವನ್ನು ರಚನೆ ಮಾಡಬೇಕೆಂದು ಹಾಸನದ ಪತ್ರಕರ್ತ ಹೆಚ್.ಬಿ.
ಮದನಗೌಡ ಕಿವಿಮಾತು ಹೇಳಿದ್ದಾರೆ.
ಯುವ ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಬರೆದಿರುವ ‘ಮರಿಯಮ್’ (ಜನ್ಮ ತಾಳುವ ಮುನ್ನ ಸೋತ ಪ್ರೀತಿ) ಚೊಚ್ಚಲ ಕಾದಂಬರಿಯನ್ನು ನಗರದ ಪತ್ರಿಕಾ ಭವನದಲ್ಲಿ ಅನಾವರಣಗೊಳಿಸಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಗೆ ಉತ್ತಮ ಸಂದೇಶವನ್ನು ರವಾನೆ ಮಾಡುವ ಕಾರ್ಯವನ್ನು ಸಾಹಿತ್ಯ ಮಾಡಬೇಕು. ಇತಿಹಾಸದ ಪುಟಗಳಲ್ಲಿ
ಅಕ್ಷರಗಳು ಅಚ್ಚಳಿಯದೆ ಉಳಿಯುವುದರಿಂದ ಸಾಹಿತ್ಯ ಎನ್ನುವುದು ಉತ್ತಮ ಸಮಾಜಕ್ಕೆ ಸಹಕಾರಿಯಾಗಿರಬೇಕು ಎಂದರು.
ಚಿಕ್ಕ ವಯಸ್ಸಿನಲ್ಲಿಯೇ ಇಸ್ಮಾಯಿಲ್ ಕಂಡಕರೆ ಸಾಹಿತ್ಯ ಕ್ಷೇತ್ರದೆಡೆಗೆ ಮನಸ್ಸು ಮಾಡಿರುವುದು ಉತ್ತಮ ಬೆಳವಣಿಗೆ ಎಂದು
ಮದನ ಗೌಡ ಶ್ಲಾಘಿಸಿದರು.
ಚಿಕ್ಕಅಳುವಾರ ಕಾಲೇಜಿನ ಉಪನ್ಯಾಸಕ ಜಮೀರ್ ಅಹಮದ್ ಮಾತನಾಡಿ, ಕೊಡಗು ಜಿಲ್ಲೆಯ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಅಗತ್ಯವಿದ್ದು, ಇದರಿಂದ ಮತ್ತಷ್ಟು ಸಾಹಿತಿಗಳು ಬೆಳಕಿಗೆ ಬರುವ ಸಾಧ್ಯತೆಗಳಿದೆ ಎಂದರು. ಸಮಾಜದಲ್ಲಿ ಸ್ತ್ರೀಗೆ ಗೌರವಯುತ ಸ್ಥಾನಮಾನವನ್ನು ನೀಡಬೇಕಾಗಿದೆ. ಸಾಧನೆ ಮಾಡುವ ಹಂಬಲದಲ್ಲಿ ಖಿನ್ನತೆಯಿಂದ ಆತ್ಮಹತ್ಯೆಗೆ ಮುಂದಾಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸವಾಲುಗಳನ್ನು ಎದುರಿಸಿ ಬದುಕಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿಕೊಳ್ಳಬೇಕೆಂದು ಹೇಳಿದರು.
ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಮಾತನಾಡಿ, ಪ್ರಸ್ತುತ ಸಾಹಿತ್ಯ ಕ್ಷೇತ್ರದಲ್ಲಿ ವಿಡಂಬನೆ, ಹಾಸ್ಯ ಮತ್ತು ಸಣ್ಣ ಕಥೆಗಳು, ನೈಜ ಘಟನೆಗಳ ಕಥಾನಕಗಳು ಹೆಚ್ಚು ಹೆಚ್ಚು ಬರುವಂತಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಸಾಹಿತ್ಯ ಕ್ಷೇತ್ರ ಮತ್ತು ಸಾಹಿತಿಗಳ ಬೆಳವಣಿಗೆಯ ಕುರಿತು ವಿಶ್ವಾಸದ ಮಾತುಗಳನ್ನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಮಾಜದ ದೂಷಣೆಗಳಿಗೆ ತಲೆಕೆಡಿಸಿಕೊಳ್ಳದೆ ಎಲ್ಲವನ್ನೂ ಎದುರಿಸಿ ಮುನ್ನುಗ್ಗಬೇಕು ಎಂದರು.
ಮರಿಯಮ್ ಪುಸ್ತಕದ ರಚನೆಕಾರ ಇಸ್ಮಾಯಿಲ್ ಕಂಡಕರೆ ಪ್ರಾಸ್ತಾವಿಕ ನುಡಿಗಳನ್ನಾಡಿ, ಪುಸ್ತಕ ರಚನೆಯ ಸಂದರ್ಭ ಎದುರಿಸಿದ ಸವಾಲುಗಳನ್ನು ಸ್ಮರಿಸಿದರು. ಸಾಕಷ್ಟು ಮಂದಿ ಜೀವನದ ಹಾದಿಯಲ್ಲಿ ಬಂದು ಹಲವು ನೆನಪುಗಳನ್ನು ಉಳಿಸಿ ಹೋಗಿದ್ದಾರೆ. ಆ ನೆನಪುಗಳ ಬುತ್ತಿಯೇ ಮರಿಯಮ್ ಪುಸ್ತಕ ಎಂದರು.
ಪ್ರೆಸ್ ಕ್ಲಬ್ ನಿರ್ದೇಶಕ ನವೀನ್ ಡಿಸೋಜ ಮಾತನಾಡಿ, ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಇಸ್ಮಾಯಿಲ್ ಅವರನ್ನು ಸನ್ಮಾನಿಸಿದರು.
ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿ, ರೆಜಿತ್ ಕುಮಾರ್ ವಂದಿಸಿದರು. ಚಿತ್ರಾ ಸುಜನ್ ಪ್ರಾರ್ಥಿಸಿದರು.