ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸದಿಗಂತ ವರದಿ, ಕಾಸರಗೋಡು:
ಕೇರಳದ ಕರಾವಳಿಯಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಪ್ರಬಲ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಸರಾಸರಿ ಗಂಟೆಗೆ 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.
ಕೇರಳ ಮತ್ತು ಲಕ್ಷದ್ವೀಪ ಕರಾವಳಿಯಲ್ಲಿ ಶೀಘ್ರದಲ್ಲೇ ಈ ಪ್ರಬಲ ಗಾಳಿ ಬೀಸಲಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಎಂಎ)ವು ಎಚ್ಚರಿಸಿದೆ. ಮೇ 11 ಮತ್ತು 12 ರಂದು ನೈಋತ್ಯ ಅರಬ್ಬೀ ಸಮುದ್ರ ಹಾಗೂ ಆಗ್ನೇಯ ಅರಬ್ಬೀ ಸಮುದ್ರದಲ್ಲಿ 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಕೇಂದ್ರ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಮೇ 13 ರಂದು 40 ರಿಂದ 50 ಕಿ.ಮೀ. ವೇಗದಲ್ಲಿ ಕೇರಳದ ಕೆಲವು ಸ್ಥಳಗಳಲ್ಲಿ ಮತ್ತು ನೈಋತ್ಯ ಅರಬ್ಬೀ ಸಮುದ್ರ ಹಾಗೂ ಆಗ್ನೇಯ ಅರಬ್ಬೀ ಸಮುದ್ರದಲ್ಲಿ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಎಚ್ಚರಿಸಲಾಗಿದೆ.
ಮೇ 14 ರಂದು 40 ರಿಂದ 50 ಕಿ.ಮೀ. ವೇಗದಲ್ಲಿ ರಾಜ್ಯದ ಕೆಲವು ಸ್ಥಳಗಳಲ್ಲಿ ಮತ್ತು 60 ಕಿ.ಮೀ. ವೇಗದಲ್ಲಿ ನೈಋತ್ಯ ಅರಬ್ಬೀ ಸಮುದ್ರದಲ್ಲಿ ಪ್ರಬಲ ಗಾಳಿ ಬೀಸಲಿದೆ. ಈ ಎಲ್ಲ ದಿನಗಳಲ್ಲಿ ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಬಾರದು ಹಾಗೂ ಕರಾವಳಿ ಪ್ರದೇಶದ ಜನರು ಗರಿಷ್ಠ ಎಚ್ಚರಿಕೆಯಿಂದ ಇರಬೇಕೆಂದು ಕೇರಳ ಸರಕಾರವು ತಿಳಿಸಿದೆ.