Monday, August 8, 2022

Latest Posts

ವಿದ್ಯಾರ್ಥಿಗಳು ಓದುವುದನ್ನು ಬಿಟ್ಟು ಹಾದಿ ತಪ್ಪುತ್ತಿದ್ದಾರೆ: ಸಂಸದ ವಿ.ಶ್ರೀನಿವಾಸ ಪ್ರಸಾದ್ 

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………..

ಹೊಸದಿಗಂತ ವರದಿ,ಮೈಸೂರು:

ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ  ನೀಡದೆ, ಬೇರೆಲ್ಲ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಹಾದಿ ತಪ್ಪುತ್ತಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಗುರುವಾರ ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣಾ ಕೇಂದ್ರವು ವಿಶ್ವಜ್ಞಾನಿ ಸಭಾಂಗಣದಲ್ಲಿ ಏರ್ಪಡಿಸಿದ್ದ ʻಹೋರಾಟದ ಸಾಗರಕ್ಕೆ ಸಾವಿಲ್ಲದ ನದಿ; ಡಾ.ಸಿದ್ಧಲಿಂಗಯ್ಯʼ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದ ಅವರು, ವಿದ್ಯಾರ್ಥಿಗಳು ಓದುವುದನ್ನೊಂದು ಬಿಟ್ಟು,ಬೇರೆ ಎಲ್ಲಾ ಕೆಲಸವನ್ನು ಮಾಡುತ್ತಾರೆ. ಅಕಾಡೆಮಿಕ್ ವಿಷಯದಲ್ಲಿ ಆಸಕ್ತಿ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಕ್ರೀಡೆ-ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೇ ಇಲ್ಲ. ಶಿಸ್ತಿನ ಕೊರೆತೆ ಕಾಣುತ್ತಿದೆ. ಒಂದು ರೀತಿ ದುಂಬಿಗಳಂತೆ ಆಗಿಬಿಟ್ಟಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ತದನಂತರ ಹೋರಾಟ ಮತ್ತಿತರರ ಚಟುವಟಿಕೆಗಳು ಎಂದರು.
ಡಾ. ಅಂಬೇಡ್ಕರ್ ಅವರು ಸಮುದಾಯವನ್ನು ಉದ್ಧಾರ ಮಾಡಬೇಕಾದರೇ ಶಿಕ್ಷಣದಿಂದಲೇ ಸಾಧ್ಯ ಎಂದು ಬಲವಾಗಿ ನಂಬಿದ್ದರು. ಅದಕ್ಕಾಗಿಯೇ ಅವರು ಯಾವ ಕಡೆಗೂ ಗಮನಹರಿಸದೇ ದಿನಕ್ಕೆ ಎಷ್ಟು ಗಂಟೆ ಅಧ್ಯಯನದಲ್ಲಿ ತೊಡಗಬಹುದೋ ಅಷ್ಟೂ ಹೊತ್ತು ಓದುತ್ತಿದ್ದರು. ಇಂತಹ ನಡವಳಿಕೆಯನ್ನು ಇಂದಿನ ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕು. ಸಮಾಜವನ್ನು ಅಭಿವೃದ್ಧಿಗೊಳಿಸುವತ್ತ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಈಗಿನ ವಿದ್ಯಾರ್ಥಿಗಳು ಎಂಎ, ಪಿಎಚ್‌ಡಿ ಪದವಿ ಪಡೆದುಕೊಂಡಿದ್ದರೂ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಕೆಲಸ ಮಾಡಲು ಹೆದರಿ ನಡುಗುತ್ತಾರೆ. ಯಾವುದಾದರೂ ಕಚೇರಿಯಲ್ಲಿ ಗುಮಾಸ್ತನ ಕೆಲಸ ಸಾಕು ಎನ್ನುತ್ತಾರೆ ವಿದ್ಯಾರ್ಥಿಗಳ ಈ ಧೋರಣೆಯನ್ನು ನಿರ್ಮೂಲನೆಗೊಳಿಸಲು ಕೌಶಲ್ಯ ಅಭಿವೃದ್ಧಿ ತರಬೇತಿ ಕೊಡಿಸುವ ಅವಶ್ಯಕತೆ ಇದೆ. ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಇಂತಹದೊಂದು ಯೋಜನೆ ರೂಪಿಸಬಹುದು ಎಂದು ಸಂಸದರು ಸಲಹೆ ನೀಡಿದರು. ಸಾಹಿತಿ, ಕವಿ ಸಿದ್ದಲಿಂಗಯ್ಯ ಅವರನ್ನು ಕೇವಲ ಪ್ರತಿಮೆಗೆ ಸೀಮಿತಗೊಳಿಸಬೇಡಿ. ಈ ರೀತಿಯ ‌ಕಾರ್ಯಕ್ರಮ ಮೂಲಕ ಅವರ ಆಶಯ, ಚಿಂತನೆಯನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದರು. ಸಿದ್ದಲಿಂಗಯ್ಯ ಅವರು 1973ರಲ್ಲಿ ಮೊದಲ ಬಾರಿಗೆ ನನಗೆ ಪರಿಚಯವಾದರು. ದಲಿತ ಸಂಘರ್ಷ ಸಮಿತಿ ಪ್ರಾರಂಭವಾದ ದಿನದಿಂದಲೂ ಸಹಕಾರ ನೀಡಿದ್ದೇನೆ. ಸಿದ್ದಲಿಂಗಯ್ಯ ಅವರು ಕಷ್ಟಪಟ್ಟು ಓದಿದರು. ಅಂಬೇಡ್ಕರ್ ಬಗ್ಗೆ ಅವರು ಬರೆದ ಹಾಡು ನನಗೆ ಸದಾ ಹೊಸ ಹುರುಪನ್ನು ತುಂಬುತ್ತದೆ. ಇಂದಿನ ವಿದ್ಯಾರ್ಥಿಗಳಿಗೆ ಶಿಸ್ತು ಮಾಯವಾಗಿದೆ. ಹಲವರು ಹಾದಿ ತಪ್ಪುತ್ತಿದ್ದಾರೆ. ಮೊದಲು ಶಿಕ್ಷಣ ಪಡೆದು ನಂತರ ಹೋರಾಟ ಮಾಡಬೇಕೆಂದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಅಧ್ಯಕ್ಷ ಪ್ರೊ.ಜೆ.ಸೋಮಶೇಖರ್ ಮಾತನಾಡಿ, ಈ ನಾಡು ಕಂಡ ಅಪರೂಪದ ಕವಿ, ನಾಡೋಜ ಡಾ.ಸಿದ್ದಲಿಂಗಯ್ಯ ಅವರರಿಗೂ  ಹಾಗೂ ಅಂಬೇಡ್ಕರ್ ಕೇಂದ್ರಕ್ಕೆ ಅವಿನಾಭಾವ ಸಂಬಂಧವಿದೆ. ಕೇಂದ್ರದ ಬೆಳವಣಿಗೆ ಹಾಗೂ ಎಲ್ಲಾ ಕಾರ್ಯಕ್ರಮದಲ್ಲಿ ನಮ್ಮ ಜೊತೆ ಸಿದ್ದಲಿಂಗಯ್ಯ ಅವರು ಇರುತ್ತಿದ್ದರು. ಮೈಸೂರಿನ ಕೊನೆಯ ಭೇಟಿ ಸಮಯದಲ್ಲೂ ಈ ಕೇಂದ್ರಕ್ಕೆ ಆಗಮಿಸಿ ನಮ್ಮನ್ನು ಹುರಿದುಂಬಿಸಿದ್ದರು,’’ ಎಂದು ಸ್ಮರಿಸಿಕೊಂಡರು.
ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ , ಡಾ.ಮಾನಸ ಸಿದ್ದಲಿಂಗಯ್ಯ, ರಂಗಾಯಣದ ಮಾಜಿ ನಿರ್ದೇಶಕ ಜರ್ನಾದನ್ (ಜನ್ನಿ) ಸೇರಿದಂತೆ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss