ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ಮಂಗಳೂರು:
ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರಿಗಾ ಬೋಟ್ಗಳಲ್ಲಿ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಘಟಕವನ್ನು ಅಳವಡಿಸಲು ಹಾಯಧನ ಒದಗಿಸುವ ಬಗ್ಗೆ ಸರಕಾರ ಮಟ್ಟದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.
ಅವರು ಶುಕ್ರವಾರ ಮಂಗಳೂರು ಹಳೆ ಬಂದರು ಧಕ್ಕೆಯ ಅಳಿವೆಬಾಗಿಲು ಬಳಿ ಬೋಟೊಂದರಲ್ಲಿ ಉಪ್ಪು ನೀರನ್ನು ಸಿಹಿಯನ್ನಾಗಿಸುವ ಘಟಕದ ಪ್ರಾತ್ಯಕ್ಷಿಕೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೀನುಗಾರಿಕಾ ಬೋಟ್ಗಳಲ್ಲಿ ಈ ಉಪಕರಣವನ್ನು ಅಳವಡಿಸಲು ಸರಕಾರದಿಂದ ಯಾವ ರೀತಿಯಲ್ಲಿ ಸಹಾಯಧನ ನೀಡಬಹುದು ಎಂಬ ಬಗ್ಗೆ ಸರಕಾರ ಮಟ್ಟದಲ್ಲಿ ನಿರ್ಧರಿಸಲಾಗುವುದು. ಕೇಂದ್ರ ಸರಕಾರದ ಮತ್ಸ್ಯಸಂಪದ ಯೋಜನೆಯಡಿಯೂ ಸಹಾಯಧನದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಕುಡಿಯಲು, ಸ್ನಾನ ಹಾಗೂ ಇತರ ಕೆಲಸ ಕಾರ್ಯಗಳಿಗೆ ಅಗತ್ಯವಾದ ಸಿಹಿ ನೀರನ್ನು ಬೋಟ್ಗಳಲ್ಲಿ ಕೊಂಡೊಯ್ಯಬೇಕಾಗುತ್ತದೆ. ಆದರೆ ಅದರ ಬದಲಾಗಿ ಈ ಘಟಕವನ್ನು ಬೋಟ್ಗಳಲ್ಲಿ ಅಳವಡಿಸಿದರೆ ನೀರನ್ನು ಹೊತ್ತೊಯ್ಯುವ ಪ್ರಮೇಯ ತಪ್ಪಲಿದೆ ಎಂದು ಸಚಿವರು ಹೇಳಿದರು.