Saturday, August 13, 2022

Latest Posts

ಯಶಸ್ವಿಯಾಗಿದೆ ಮಲೆನಾಡಿನ ಪಶ್ಚಿಮಘಟ್ಟದ ಸೆರಗಿನಲ್ಲಿ ನಡೆದ ‘ವನ ಬೆಳಕು’ ಸರಣಿ ಶಿಬಿರ

ಹೊಸ ದಿಗಂತ ವರದಿ, ಉಡುಪಿ:

ಶಾಲಾ ಪುಟಾಣಿ ಮಕ್ಕಳಿಗೆ ಸರಕಾರ ವಿದ್ಯಾಗಮ ಕಾರ್ಯಕ್ರಮ ನಡೆಸುತ್ತಿದ್ದರೆ, ಮಂಗಳೂರಿನ ತಂಡವೊಂದು ಮಲೆನಾಡಿನ ಪಶ್ಚಿಮಘಟ್ಟದ ಸೆರಗಿನಲ್ಲಿ ‘ವನ ಬೆಳಕು’ ಸರಣಿ ಶಿಬಿರ ಆಯೋಜಿಸಿ ಯಶಸ್ವಿಯಾಗಿದೆ. ಸಾವಿರಾರು ಮಂದಿ ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ.
ಮಂಗಳೂರಿನ ಸಹ್ಯಾದ್ರಿ ಸಂಚಯ ತಂಡವು ಆರಂಭದಲ್ಲಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಕಾನನದಲ್ಲಿ ಬುಡಕಟ್ಟು ಮಕ್ಕಳಿಗಾಗಿ ವನಬೆಳಕು ಅಡವಿ ಮಕ್ಕಳ ಸೃಜನ ವಿಕಸನ ಶಿಬಿರ ಆಯೋಜಿಸಿತ್ತು. ನಂತರ ಅದನ್ನು ಉ.ಕ. ಜಿಲ್ಲೆಯ ಐದು ತಾಲೂಕುಗಳಿಗೆ ವಿಸ್ತರಿಸಿದ್ದಲ್ಲದೇ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಮಲೆಗಳಲ್ಲಿಯೂ ಶಿಬಿರ ನಡೆಸಲಾಗಿದೆ.
ಕೋವಿಡ್ ಲಾಕ್‌ಡೌನ್ ನಂತರ ಕೊರೋನಾ ಕಾರಣದಿಂದ ಬಾಗಿಲು ಮುಚ್ಚಿದ್ದ ಶಾಲೆಗಳು ತೆರೆಯಲೇ ಇಲ್ಲ. ನಗರದ ಮಕ್ಕಳಿಗೆ ಆನ್‌ಲೈನ್ ತರಗತಿಗಳಿದ್ದವು, ದೂರದರ್ಶನದಲ್ಲಿಯೂ ಪಾಠ ಪ್ರಸಾರವಾಗುತ್ತಿತ್ತು. ಆದರೆ ಕಾಡಿನ ಮಧ್ಯೆ ಇರುವ ಬುಡಕಟ್ಟು ಜನರ ಮಕ್ಕಳಿಗೆ ಇದ್ಯಾವ ಅವಕಾಶವೂ ಇರಲಿಲ್ಲ. ಬೇರೆ ಸಮಯದಲ್ಲಿ ಸದಾ ಚೈತನ್ಯದ ಚಿಲುಮೆಯಂತಿದ್ದ ಮಕ್ಕಳು, ಶಾಲಾ ಮುಚ್ಚಿದ್ದರಿಂದ ಮಂಕಾಗಿದ್ದರು. ಇದನ್ನು ಗಮನಿಸಿದ ಸಹ್ಯಾದ್ರಿ ಸಂಚಯದ ಸಂಚಾಲಕ, ಕಲಾವಿದ ದಿನೇಶ್ ಹೊಳ್ಳ ವನಬೆಳಕು ಶಿಬಿರದ ರೂಪುರೇಷೆ ಸಿದ್ಧಪಡಿಸಿದರು.

ಸುಕ್ರಿ ಅಜ್ಜಿ ಮನೆಯಲ್ಲಿ ಪ್ರಥಮ ಶಿಬಿರ

ವನ ಬೆಳಕು ಸಂಪೂರ್ಣ ಶಿಬಿರಗಳಿಗೆ ಯುಎಸ್‌ಎಯಲ್ಲಿರುವ ಪಣಬೂರು ವಾಸುದೇವ ಐತಾಳ್ ಪ್ರಾಯೋಕತ್ವ ವಹಿಸಿದ್ದರು. ಪ್ರಥಮ ವನಬೆಳಕು ಶಿಬಿರ ಡಿ. 3ರಂದು ಅಂಕೋಲ ತಾಲೂಕಿನ ಬಡಿಗೇರಿ ಹಳ್ಳಿಯಲ್ಲಿರುವ ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಅವರ ಮನೆಯಲ್ಲಿ ಜರಗಿತು. ಅವರ ಮನೆಯಂಗಳದಲ್ಲಿ ನಡೆದ ಶಿಬಿರದಲ್ಲಿ 26 ಮಕ್ಕಳು ಭಾಗವಹಿದ್ದರು. ನಂತರ ಉ.ಕ. ಜಿಲ್ಲೆಯಲ್ಲಿ 29 ಶಿಬಿರಗಳನ್ನು ನಡೆಸಲಾಗಿದೆ. ಸಿದ್ದಿ, ಹಾಲಕ್ಕಿ, ಕುಡುಬಿ ಮೊದಲಾದ ಬುಡಕಟ್ಟು ಮಕ್ಕಳು ಶಿಬಿರಗಳಲ್ಲಿ ಭಾಗವಹಿಸಿದ್ದರು.

ಮೂರು ಜಿಲ್ಲೆಗಳಲ್ಲಿ 35 ಶಿಬಿರಗಳು
ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಟ್ಟು 35 ಶಿಬಿರಗಳನ್ನು ಆಯೋಜಿಸಲಾಗಿವೆ. ಉ.ಕ. ಜಿಲ್ಲೆಯ ಅಂಕೋಲ, ಯಲ್ಲಾಪುರ, ಜೋಯ್ಡಾ, ಅಣಶಿ, ಹಳಿಯಾಳ, ಮುಂಡಗೋಡ ತಾಲೂಕುಗಳಲ್ಲಿ 29 ಶಿಬಿರಗಳು ನಡೆದಿವೆ. ನೆರೆಯ ದ.ಕ. ಜಿಲ್ಲೆಯ ಮಕ್ಕಿ ಪರ್ಲ, ಕಜಕೆ ಮತ್ತು ಶಿಶಿಲದಲ್ಲಿ ಮೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬಾಳೂರು, ಮಲೆಮನೆ ಮತ್ತು ಮಾವಿನಕಟ್ಟೆಯಲ್ಲಿಯೂ ಮೂರು ಶಿಬಿರಗಳು ಜರಗಿವೆ. ಒಟ್ಟು 1200 ಮಕ್ಕಳು ಈ ವನಬೆಳಕು ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ.
ಬೆಂಗಳೂರು, ಮಂಗಳೂರು, ಬಳ್ಳಾರಿ, ಧಾರವಾಡ, ಪುತ್ತೂರು, ಮೂಡಿಗೆರೆ, ಕೆನಡಾ, ಉಜಿರೆ ಮೊದಲಾದೆಡೆಗಳಿಂದ 26 ಮಂದಿ ಸಂಪನ್ಮೂಲ ವ್ಯಕ್ತಿಗಳು ಶಿಬಿರ ನಡೆಸಿದ್ದಾರೆ. ಬಯಲು, ಕಾಡು, ಮನೆಯ ಜಗುಲಿ, ಮರದ ನೆರಳು, ನದಿತಟ ಹೀಗೆ ಪ್ರಕೃತಿಯ ಮಧ್ಯೆಯೇ ಮಕ್ಕಳ ಈ ಶಿಬಿರ ಸಂಪನ್ನಗೊಂಡಿತು. ಶಿಬಿರದಲ್ಲಿ ಸಂಗೀತ, ಚಿತ್ರಕಲೆ, ಕ್ರ್‌ಟಾ, ನೃತ್ಯ, ಗಾಳಿಪಟ ತಯಾರಿ, ಕೈಬರಹ ಉತ್ತಮಗೊಳಿಸುವುದು, ಪಶ್ಚಿಮಘಟ್ಟದ ಪ್ರಾಮುಖ್ಯತೆ ಮೊದಲಾದವುಗಳ ಕುರಿತು ತಿಳಿಸಲಾಗಿದೆ. ಒಂದರಿಂದ 7ನೇ ತರಗತಿಯ ಮಕ್ಕಳು ಪಾಲ್ಗೊಂಡಿದ್ದರು ಎಂದ ದಿನೇಶ್ ಹೊಳ್ಳ, ಶಿಬಿರ ಯಶಸ್ವಿಯಾಗಿರುವ ಬಗ್ಗೆ ‘ಹೊಸ ದಿಗಂತ’ದೊಂದಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss