ಹೊಸ ದಿಗಂತ ವರದಿ, ಮಂಗಳೂರು:
ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಪದವಿ ಪಡೆದು ಹೊರ ಜಗತ್ತಿಗೆ ಕಾಲಿಡುತ್ತಿರುವ ಯುವ ಜನಾಂಗ ಕಠಿಣ ಪರಿಶ್ರಮ ಪಡುವುದಕ್ಕೆ ಸಿದ್ಧರಿರಬೇಕು. ಯಶಸ್ಸಿಗೆ ಒಳದಾರಿಗಳು ಇರುವುದಿಲ್ಲ ಎಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಹೇಳಿದ್ದಾರೆ.
ಅವರು ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ 39ನೇ ಘಟಿಕೋತ್ಸವದಲ್ಲಿ ಆನ್ ಲೈನ್ ಘಟಿಕೋತ್ಸವ ಭಾಷಣ ಮಾಡಿದರು.
ಗಳಿಸಿದ ಆದಾಯವೆಲ್ಲಾ ತನ್ನದು ಎಂದು ಭಾವಿಸದೆ ಒಂದು ಭಾಗವನ್ನು ಸಮಾಜಕ್ಕಾಗಿ ಖರ್ಚು ಮಾಡುವುದು ಒಳಿತು. ಕೊಡುವುದರಲ್ಲಿ ಸಂತೋಷ ಪಡೆಯ ಬೇಕೇ ಹೊರತು, ಸಂಪತ್ತು ಕೂಡಿಟ್ಟು ಕೆಟ್ಟ ವ್ಯಸನಗಳಿಗೆ ವ್ಯಯಿಸುವುದು ಸಲ್ಲದು ಎಂದು ಸುಧಾ ಮೂರ್ತಿ ನುಡಿದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿ ಘಟಿಕೋತ್ಸವ ಕಲಾಪಗಳನ್ನು ನಿರ್ವಹಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ 117 ಮಂದಿ ಪಿ.ಎಚ್.ಡಿ ಪದವೀಧರರು, 10 ಮಂದಿ ಚಿನ್ನದ ಪದಕ ವಿಜೇತರು ಹಾಗೂ 69 ಮಂದಿ ಪ್ರಥಮ ರಾಂಕ್ ವಿಜೇತರಿಗೆ ಮಾತ್ರ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು.
ಕುಲ ಸಚಿವ (ಪ್ರಭಾರ) ಪ್ರೊ.ಪಿ.ಎಲ್.ಧರ್ಮ, ಹಣಕಾಸು ಅಧಿಕಾರಿ ಪ್ರೊ.ಬಿ.ನಾರಾಯಣ, ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ತು ಸದಸ್ಯರು ಹಾಗೂ ವಿವಿಧ ನಿಕಾಯಗಳ ಡೀನರು ಉಪಸ್ಥಿತರಿದ್ದರು.