ಸುಡಾನ್​ನಲ್ಲಿ ಸೇನಾ ಸಂಘರ್ಷ:​​ ಮೇ 4 ರಿಂದ 11ರ ವರೆಗೆ ಕದನ ವಿರಾಮಕ್ಕೆ ಒಪ್ಪಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸುಡಾನ್ ದೇಶದಲ್ಲಿ​ ಅಧಿಕಾರಕ್ಕಾಗಿ ಸೇನೆ ಮತ್ತು ಅರೆಸೇನಾ ಪಡೆಗಳ ಮಧ್ಯೆ ನಡೆಯುತ್ತಿರುವ ಸಂಘರ್ಷ ತಾರಕಕ್ಕೇರಿದ್ದು, ಅಲ್ಲಿನ ಜನರ ಸ್ಥಿತಿ ಅತಂತ್ರವಾಗಿದೆ. ಹಲವು ದಿನಗಳಿಂದ ನಡೆಯುತ್ತಿರುವ ಆಂತರಿಕ ಯುದ್ಧಕ್ಕೆ 2ನೇ ಬಾರಿಗೆ ಕದನ ವಿರಾಮ ಘೋಷಿಸಲಾಗಿದೆ. ಮೇ 4 ರಿಂದ 11 ರವರೆಗೆ 7 ದಿನಗಳ ಕಾಲ ಕದನ ವಿರಾಮಕ್ಕೆ ಉಭಯ ಸೇನೆಗಳು ಒಪ್ಪಿಗೆ ಸೂಚಿಸಿವೆ.

ಈ ವೇಳೆ ಮಾತುಕತೆಯ ಮೂಲಕ ಸಂಘರ್ಷ ಕೊನೆಗಾಣಿಸಲು ಶಾಂತಿ ಸಂಧಾನದ ಒತ್ತಾಯ ಕೇಳಿಬಂದಿದೆ. ಸುಡಾನ್ ಸಶಸ್ತ್ರ ಪಡೆಗಳ ಕಮಾಂಡರ್ ಇನ್ ಚೀಫ್ ಜನರಲ್ ಅಬ್ದೆಲ್ ಫತಾಹ್ ಅಲ್ ಬುರ್ಹಾನ್ ಮತ್ತು ಕ್ಷಿಪ್ರ ಪಡೆಗಳ ಮುಖ್ಯಸ್ಥ ಜನರಲ್ ಮೊಹಮ್ಮದ್ ಹಮ್ದಾನ್ ದಗಾಲೊ ಅವರು ಏಳು ದಿನಗಳ ಕದನ ವಿರಾಮವನ್ನು ತಾತ್ವಿಕವಾಗಿ ಸಮ್ಮತಿ ಸೂಚಿಸಿದ್ದಾರೆ ಎಂದು ದಕ್ಷಿಣ ಸುಡಾನ್‌ನ ವಿದೇಶಾಂಗ ಸಚಿವಾಲಯ ಮಂಗಳವಾರ ಹೇಳಿದೆ. ಕದನ ವಿರಾಮದ ಜೊತೆಗೆ ಮಾತುಕತೆ ನಡೆಸಲು ತಮ್ಮ ಪ್ರತಿನಿಧಿಗಳನ್ನು ಹೆಸರಿಸಿದ್ದಾರೆ. ಸುದೀರ್ಘ ಕದನದಿಂದಾಗುವ ಪರಿಣಾಮಗಳನ್ನೂ ಉಭಯ ಸೇನೆಗಳ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಘರ್ಷಣೆಯ ಪರಿಣಾಮವಾಗಿ ಸುಡಾನ್ ರಕ್ತಪಾತವನ್ನು ಎದುರಿಸುತ್ತಿದೆ. ಹೀಗಾಗಿ ಉಭಯ ಸೇನೆಗಳ ನಾಯಕರು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡಲು ಅಸೆಂಬ್ಲಿ ಆಫ್ ಹೆಡ್ಸ್ ಆಫ್ ಸ್ಟೇಟ್‌ನ ನಾಯಕ, ಅಧ್ಯಕ್ಷ ಸಾಲ್ವಾ ಕಿರ್ ಒತ್ತಾಯಿಸಿದ್ದಾರೆ. ಖಾರ್ಟೂಮ್​ನಲ್ಲಿ ಪರಿಸ್ಥಿತಿಯಲ್ಲಿ ತೀರಾ ಹದಗೆಟ್ಟಿದೆ. ನಾಯಕರ ನಡುವಣ ಮಾತುಕತೆ ಅನಿವಾರ್ಯವಾಗಿದೆ. ಕದನ ವಿರಾಮಕ್ಕಾಗಿ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಒತ್ತಡ ಕೇಳಿಬಂದಿತ್ತು. ಇದಕ್ಕೆ ಜನರಲ್ ಅಲ್ ಬುರ್ಹಾನ್ ಮತ್ತು ಜನರಲ್ ದಗಾಲೊ ಒಪ್ಪಿದ್ದಾರೆ. ಕದನ ವಿರಾಮದ ನಡುವೆ ಮಾತುಕತೆ ನಡೆಸಲು ಪ್ರತಿನಿಧಿಗಳನ್ನು ಕಳುಹಿಸಿ ಎಂದು ಅಧ್ಯಕ್ಷರು ಮನವಿ ಮಾಡಿದ್ದಾರೆ.

3 ಲಕ್ಷ ಜನರ ಸ್ಥಳಾಂತರ

ಸಂಘರ್ಷಪೀಡಿತ ಸುಡಾನ್​ನಿಂದ ನಿರಾಶ್ರಿತರಾದ 3.30 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಗೊಳಿಸಲಾಗಿದೆ. 1 ಲಕ್ಷಕ್ಕೂ ಹೆಚ್ಚು ಮಂದಿ ಗಡಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ. ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಸುಡಾನ್‌ನಲ್ಲಿ ಘರ್ಷಣೆ ಮುಂದುವರೆದಲ್ಲಿ 8 ಲಕ್ಷಕ್ಕೂ ಹೆಚ್ಚು ಜನರು ನೆರೆಯ ದೇಶಗಳಿಗೆ ಪಲಾಯನ ಮಾಡಬಹುದು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಅಂದಾಜಿಸಿದ್ದಾರೆ.

ಏಪ್ರಿಲ್ 15 ರಿಂದ ಭುಗಿಲೆದ್ದ ಹೋರಾಟದಿಂದಾಗಿ ಅಂದಾಜು 3,34,000 ಮಂದಿ ಬೇರೆ ದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ. 1 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು ಸುಡಾನ್‌ನಿಂದ ನೆರೆಯ ದೇಶಗಳಿಗೆ ತೆರಳಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!