ಪ್ರಧಾನಿ ಮೋದಿ ಸ್ವಾಗತಕ್ಕೆ ಮಧುವಣಗಿತ್ತಿಯಂತೆ ಸಜ್ಜುಗೊಂಡ ಸಕ್ಕರೆ ನಾಡು!

ಹೊಸದಿಗಂತ ವರದಿ, ಮಂಡ್ಯ:

ಪ್ರಧಾನಿ ನರೇಂದ್ರ ಮೋದಿಯವರ ಸ್ವಾಗತಕ್ಕೆ ಸಕ್ಕರೆ ಜಿಲ್ಲೆ ಮಂಡ್ಯ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಗರದ ಹೃದಯ ಭಾಗದಲ್ಲಿ ಹಾದುಹೋಗಿರುವ ಬೆಂಗಳೂರು ಮೈಸೂರು ಹೆದ್ದಾರಿ ಸಂಪೂರ್ಣ ಕೇಸರೀಮಯವಾಗಿದೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಕಾರ‌್ಯಕ್ರಮಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರಮೋದಿಯವರನ್ನು ಸ್ವಾಗತಿಸಲು ಸಕಲ ರೀತಿಯ ಸಿದ್ಧತೆಗಳನ್ನೂ ಮಾಡಲಾಗಿದೆ. ದೆಹಲಿಯಿಂದ ವಿಮಾನದಲ್ಲಿ ತೆರಳುವ ಪ್ರಧಾನಿಗಳು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ಮಂಡ್ಯ ನಗರದ ಪ್ರತಿಷ್ಠಿತ ಪಿ.ಇ.ಎಸ್. ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಬೆಳಿಗ್ಗೆ 11.30 ಗಂಟೆಗೆ ಬಂದಿಳಿಯಲಿದ್ದಾರೆ.


ನಂತರ ನಗರದ ಪ್ರವಾಸಿ ಮಂದಿರದ ಮುಂಭಾಗದಿಂದ ನಂದಾ ಚಿತ್ರಮಂದಿರದವರೆಗೆ ರೋಡ್ ಶೋ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಿಗೆ ದರ್ಶನ ನೀಡಲಿದ್ದಾರೆ.

ತರುವಾಯ ಹೆದ್ದಾರಿ ಮೂಲಕ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಲೋಕಾರ್ಪಣೆ, ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಬಿಗಿ ಬಂದೋಬಸ್ತ್‌ :
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ರಕ್ಷಣಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದ್ದು, ಎಸ್‌ಪಿಜಿ ಮತ್ತು ರಾಜ್ಯ ಪೊಲೀಸ್ ಇಲಾಖೆಯಿಂದ ಅಗತ್ಯ ಪೊಲೀಸ್ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

1.8 ಕಿ.ಮೀ ರೋಡ್ ಶೋ:
ಸುಮಾರು 1.8 ಕಿ.ಮೀ. ವ್ಯಾಪ್ತಿಯಲ್ಲಿ (ಪ್ರವಾಸಿ ಮಂದಿರದಿಂದ ನಂದಾ ಚಿತ್ರಮಂದಿರದವರೆಗೆ) ನಡೆಯುವ ರೋಡ್ ಶೋ ನಡೆಸುವ ಪ್ರಧಾನಿಗಳಿಗೆ ವಿಶೇಷ ಭದ್ರತೆ ಒದಗಿಸಲು ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಹಾಗೂ ಸಾವಿರಾರು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ರೋಡ್ ಶೋ ವೇಳೆ ನೆಚ್ಚಿನ ಪ್ರಧಾನಿಯನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನತೆ ಭಾಗಿಯಾಗುವ ನಿರೀಕ್ಷೆ ಇದ್ದು, ಇವರೆಲ್ಲರಿಗೂ ಬಿಸಿಲ ಬೇಗೆ ತಣಿಸಲು ಕುಡಿಯುವ ನೀರು ಮತ್ತು ಮಜ್ಜಿಗೆ ವ್ಯವಸ್ಥೆಯನ್ನು ಮಾಡಲಾಗಿದೆ.
ಇಷ್ಟೇ ಅಲ್ಲದೆ, ಹಿರಿಯ ನಾಗರಿಕರು, ಮಕ್ಕಳು ಮತ್ತು ಮಹಿಳೆಯರು ಪ್ರತ್ಯೇಕವಾಗಿ ಕೂರಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸಾರ್ವಜನಿಕರಿಗೆ ಬೇಸರವಾಗದಂತೆ ಪ್ರತಿ ನೂರು ಮೀ.ಗೆ ಜನಪದ ಕಲಾತಂಡಗಳ ಪ್ರದರ್ಶನ ಆಯೋಜಿಸಲಾಗಿದೆ.

ಕೇಸರಿಮಯ:
ರಸ್ತೆಯುದ್ದಕ್ಕೂ ಮೋದಿ ಸ್ವಾಗತಕೋರುವ ಎತ್ತರದ ಫ್ಲೆಕ್ಸ್‌ಗಳು, ಬಂಟಿಂಗ್, ಬ್ಯಾನರ್, ಬಿಜೆಪಿ ಬಾವುಟ ಹಾಗೂ ಬೃಹತ್ ಉದ್ದದ ಕೇಸರಿ ಬಟ್ಟೆಗಳನ್ನು ಹಾಕಲಾಗಿದ್ದು, ರಸ್ತೆಯುದ್ದಕ್ಕೂ ಕೇಸರಿಮಯವಾಗಿದೆ.

ಮಹಾದ್ವಾರಗಳ ನಿರ್ಮಾಣ:
ಮೋದಿ ರೋಡ್ ಶೋ ನಡೆಸುವ ಮಾರ್ಗದ ಪ್ರವಾಸಿ ಮಂದರಿದ ಬಳಿ ಸರ್ ಎಂ. ವಿಶ್ವೇಶ್ವರಯ್ಯ ಮಹಾದ್ವಾರ, ಜೆ.ಸಿ.ವೃತ್ತದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾದ್ವಾರ ಹಾಗೂ ಮೈಶುಗರ್ ವೃತ್ತದಲ್ಲಿ ಉರಿಗೌಡ ಮತ್ತು ದೊಡ್ಡ ನಂಜೇಗೌಡರ ಮಹಾದ್ವಾರವನ್ನು ನಿರ್ಮಾಣ ಮಾಡಲಾಗಿದೆ.

ಅದ್ದೂರಿ ವೇದಿಕೆ :
ಫಲಾನುಭವಿಗಳ ಸಮಾವೇಶಕ್ಕಾಗಿ ಅದ್ದೂರಿ ವೇದಿಕೆಯನ್ನು ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರಮೋದಿಯವರು ವೇದಿಕೆಯ ಹಿಂಬದಿಗೆ ಕಾರಿನಲ್ಲಿ ಆಗಮಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಹಿಂಭಾಗದಲ್ಲೇ ಹೆದ್ದಾರಿ ಪ್ರಾಧಿಕಾರದವರು ವಿನೂತನವಾಗಿ ನಿರ್ಮಿಸಿರುವ ಹೆದ್ದಾರಿಯ ಚಿತ್ರಪಟಗಳನ್ನೊಳಗೊಂಡ ವಿಶೇಷ ಮ್ಯೂಸಿಯಂನಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್‌ನ ದೃಶ್ಯಗಳನ್ನು ವೀಕ್ಷಿಸಲಿದ್ದಾರೆ. ಬಳಿಕ ವೇದಿಕೆ ಕಾರ‌್ಯಕ್ರಮದಲ್ಲಿ ಭಾಗವಹಿಸುವರು.

ಎಸ್‌ಪಿಜಿ ತಾಲೀಮು :
ನರೇಂದ್ರ ಮೋದಿ ಅವರು ಭಾನುವಾರ ನಗರದಲ್ಲಿ ರೋಡ್ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಮುನ್ನಾ ದಿನವಾದ ಶನಿವಾರ ಎಸ್‌ಪಿಜಿ ತಂಡ ತಾಲೀಮು ನಡೆಸಿತು.

ನಗರದ ಪ್ರವಾಸಿ ಮಂದಿರದಿಂದ ನಂದಾ ಚಿತ್ರಮಂದಿರದವರೆಗೆ ತಾಲೀಮು ನಡೆಸಿದ ಎಸ್‌ಪಿಜಿ ತಂಡದ ಅಧಿಕಾರಿಗಳ ಜತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!