Wednesday, June 29, 2022

Latest Posts

ಸಾಲಬಾದೆ ತಾಳದೇ ಆತ್ಮಹತ್ಯೆಗೆ ಶರಣಾದ ದಂಪತಿ: ಸಾವು ಬದುಕಿನ ಹೋರಾಟದಲ್ಲಿ ಮಗಳು

ಹೊಸದಿಗಂತ ವರದಿ, ಹಾವೇರಿ:

ಸಾಲಬಾದೆ ತಾಳಲಾರದೇ ಆಲದಕಟ್ಟಿ ಗ್ರಾಮದ ರೈತ ಶಂಕ್ರಪ್ಪ-ವಾಣಿಶ್ರೀ ಅಗಡಿ ದಂಪತಿಗಳು ಆತ್ಮಹತ್ಯೆಗೆ ಶರಣು. ಮಗಳು ಕೀರ್ತಿ ಸಾವು ಬದುಕಿನ ನಡುವೆ ಹೋರಾಡುತ್ತಿರುವಳು.
ಪತ್ನಿಯ ನಿಧನ ವಾರ್ತೆ ಕೇಳಿ ಪತಿ ಹೊಲದಲ್ಲಿನ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಸೋಮವಾರ ತಡ ರಾತ್ರಿ ಸಂಭವಿಸಿರುವುದು ವರದಿಯಾಗಿದೆ.
ನೇಣಿಗೆ ಶರಣಾಗಿರುವ ರೈತನ ಪತ್ನಿ ವಾಣಿಶ್ರೀ ಹಾಗೂ ಮಗಳು ಕೀರ್ತಿ ಭಾನುವಾರ ಬೆಳಿಗ್ಗೆ ವಿಷ ಸೇವನೆ ಮಾಡಿದ್ದರು. ಇವರನ್ನು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇವರು ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸದೇ ಇದ್ದುದರಿಂದ ಇವರನ್ನು ಸೋಮವಾರ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲು ಮಾಡಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೇ ವಾಣಿಶ್ರೀ ಅವರು ಸೋಮವಾರ ರಾತ್ರಿ ೧೨ ಗಂಟೆಗೆ ನಿಧನರಾಗಿದ್ದಾರೆ. ಈ ವಿಷಯ ತಿಳಿದ ಪತಿ ಶಂಕ್ರಪ್ಪ ಅಗಡಿ ತಮ್ಮ ಜಮೀನಿಗೆ ತೆರಳಿ ಜಮೀನಿನಲ್ಲಿನ ಮಾವಿನ ಮರಕ್ಕೆ ರಾತ್ರಿ ಒಂದು ಗಂಟೆಯ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆಗೆ ಶರಣಾಗಿದ್ದಾರೆ. ಪ್ರಸಕ್ತ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗಳು ಕೀರ್ತಿಯೂ ಕೂಡ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಸಾಲ ಬಾದೆ ಹೆಚ್ಚಾಗಿದ್ದರಿಂದ ರೈತ ಶಂಕ್ರಪ್ಪ ಅಗಡಿಯವರು ಕಳೆದ ವರ್ಷ ತಮ್ಮ ಎರಡುವರೆ ಎಕರೆ ಜಮೀಜಿನಲ್ಲಿ ಒಂದುವರೆ ಎಕರೆ ಜಮೀನನ್ನು ಮಾರಾಟ ಮಾಡಿ ಅಲ್ಪ ಸಾಲವನ್ನು ತೀರಿಸಿದ್ದರು. ಈ ವರ್ಷ ಉತ್ತಮ ಬೆಳೆ ಬರುತ್ತದೆಂಬ ನಿರೀಕ್ಷೆಯಲ್ಲಿದ್ದ ರೈತ ಅಗಡಿಯವರ ಕುಂಟುಂಬ ನಿರೀಕ್ಷೆ ಅಧಿಕ ಮಳೆಯಿಂದ ಬೆಳೆ ಹಾನಿಯಾಗುವ ಮೂಲಕ ಕೊಚ್ಚಿಹೋಗಿತ್ತು.
ಪ್ರಸಕ್ತ ದುರಂತಕ್ಕೆ ಒಳಗಾಗಿರುವ ಅಗಡಿ ರೈತ ಕುಟುಂಬ ಅಂದಾಜು ೬,೮೦,೦೦೦ ರೂಗಳ ಸಾಲವನ್ನು ಹೊಂದಿತ್ತು ಎಂದು ಹೇಳಲಾಗುತ್ತಿದೆ. ಇದನ್ನು ಇರುವ ಕೇವಲ ೩೫ ಗುಂಟೆ ಜಮೀನಿನಲ್ಲಿ ದುಡಿದು ತೀರಿಸುವುದು ಕಷ್ಟ ಎಂದು ಮನಗಂಡ ರೈತನ ಪತ್ನಿ ಹಾಗೂ ಮಗಳು ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ಸ್ಥಳಿಯರು ತಿಳಿಸಿದರು.
ಬೆಳೆದುನಿಂತ ಮಗಳ ಮದುವೆ ಹಾಗೂ ಸಾಲ ತೀರಿಸುವ ಚಿಂತೆಯಿಂದ ಮನನೊಂದಿದ್ದ ತಾಯಿ ಹಾಗೂ ಮಗಳು ಒಟ್ಟಿಗೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು.
>> ಹಿನ್ನಲೆ
ನೇಣಿಗೆ ಶರಣಾಗಿರುವ ರೈತ ಶಂಕ್ರಪ್ಪ ಅಗಡಿ ಅವರು ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಮಾದವರು. ಇವರು ತಮ್ಮ ಸ್ವಂತ ೩೫ ಗುಂಟೆ ಜಮೀನಲ್ಲದೆ ಬೇರೆಯವರ ೮ ಎಕರೆ ಜಮೀನನ್ನು ಲಾವಣಿ ಪಡೆದುಕೊಂಡು ಕಳೆದ ಕೆಲ ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದರು.
ಕಳೆದ ಎರಡ್ಮೂರ ವರ್ಷಗಳಿಂದ ಆದ ಅತಿವೃಷ್ಠಿಯಿಂದ ಉತ್ತಮ ಬೆಳೆ ಬಾರದೆ ಹತ್ತಾರು ಲಕ್ಷ ರೂಗಳ ಸಾಲವನ್ನು ಮಾಡಿಕೊಂಡಿದ್ದರು. ಇದರಿಂದ ಶಂಕ್ರಪ್ಪ ಅಗಡಿ ಅವರ ಮಡದಿ ವಾಣಿಶ್ರೀ ಹಾಗೂ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಮಗಳು ಕೀರ್ತಿ ಬಹಳ ಮನನೊಂದಿದ್ದರು. ಸಾಲದ ಹೊರೆ ದಿನದಿಂದ ದಿನಕ್ಕೂ ಹೆಚ್ಚಾಗುತ್ತಿರುವುದನ್ನು ಮನಗಂಡ ತಾಯಿ ಹಾಗೂ ಮಗಳು ಭಾನುವಾರ ಮನೆಯಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಪ್ರಯತ್ನಿಸಿದ್ದರು.
ತಾಯಿ ಹಾಗೂ ಮಗಳನ್ನು ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇದ್ದುದರಿಂದ ಇವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಾಣಿಶ್ರೀ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ೧೨ ಗಂಟೆಗೆ ನಿಧನರಾಗಿದ್ದಾರೆ.
ಈ ವಿಷಯ ರೈತ ಶಂಕ್ರಪ್ಪ ಅಗಡಿಯವರಿಗೆ ತಿಳಿದ ಕೂಡಲೇ ಹೊಲಕ್ಕೆ ತೆರಳಿ ಅವರು ಸಹ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಂಕ್ರಪ್ಪನಿಗೆ ಒಬ್ಬ ಪುತ್ರನಿದ್ದು ಖಾಸಗಿ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಈಗ ತಂದೆ ತಾಯಿಯ ಅಂತ್ಯ ಸಂಸ್ಕಾರ ಮಾಡಿ ದುಃಕ್ಕಿಸುತ್ತಿರುವ ಇವನು ಈಗ ತಂಗಿಯೂ ಸಹ ಬದುಕಿ ಉಳಿಯುತ್ತಾಳೋ ಇಲ್ಲವೋ ಎನ್ನುವ ಚಿಂತೆಯಲ್ಲಿರುವನು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss