ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ವರ್ಗಾವಣೆಗೆ ಸುಕ್ರಿ ಬೊಮ್ಮ ಗೌಡ- ತುಳಸಿ ಗೌಡ ವಿರೋಧ

ಹೊಸದಿಗಂತ ವರದಿ,ಅಂಕೋಲಾ:

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡದೇ ಜಿಲ್ಲೆಯಲ್ಲಿ ಅವರ ಸೇವೆಯನ್ನು ಮುಂದುವರಿಸಬೇಕು ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತ ಸುಕ್ರಿ ಬೊಮ್ಮ ಗೌಡ ಮತ್ತು ತುಳಸಿ ಗೌಡ ಅವರು ಆಗ್ರಹಿಸಿದರು.
ತಾಲೂಕಿನ ಬಡಗೇರಿಯ ಸುಕ್ರಜ್ಜಿ ಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪದ್ಮಶ್ರೀದ್ವಯರು ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರ ವರ್ಗಾವಣೆಯ ಪ್ರಯತ್ನಕ್ಕೆ ತಮ್ಮ ವಿರೋಧ ಇರುವುದಾಗಿ ತಿಳಿಸಿದರು.
ಜಾನಪದ ಕೋಗಿಲೆ ಪದ್ಮಶ್ರೀ ಸುಕ್ರಿ ಗೌಡ ಅವರು ಮಾತನಾಡಿ ಡಾ.ಸುಮನ ಪನ್ನೇಕರ್ ಅವರು ಅಧಿಕಾರ ಸ್ವೀಕರಿಸಿದ ನಂತರ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಲು ಕೈಗೊಳ್ಳುತ್ತಿರುವ ಕ್ರಮ ಮೆಚ್ಚುವಂತದ್ದು ಇದರಿಂದಾಗಿ ಅಕ್ರಮ ಸರಾಯಿ ಮಾರಾಟ, ಮಟಕಾ, ಜೂಜಾಟ ನಿಯಂತ್ರಣಕ್ಕೆ ಬಂದು ಹಲವಾರು ಬಡ ಕುಟುಂಬಗಳು ನೆಮ್ಮದಿಯಲ್ಲಿ ಬದುಕುವಂತಾಗಿದೆ ಇಂಥ ದಿಟ್ಟ ಪೊಲೀಸ್ ಅಧಿಕಾರಿ ನಮ್ಮ ಜಿಲ್ಲೆಯಲ್ಲಿ ಇರಬೇಕು ಎಂದು ಸರ್ಕಾರಕ್ಕೆ ಕೈ ಜೋಡಿಸಿ ಕೇಳಿಕೊಳ್ಳುವುದಾಗಿ ತಿಳಿಸಿದರು.
ವೃಕ್ಷಮಾತೆ ಖ್ಯಾತಿಯ ಪದ್ಮಶ್ರೀ ತುಳಸಿ ಗೌಡ ಹೊನ್ನಳ್ಳಿ ಅವರು ಮಾತನಾಡಿ ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುತ್ತಿರುವ ಎಸ್.ಪಿ ಸುಮನ್ ಪನ್ನೇಕರ್ ಅವರ ವರ್ಗಾವಣೆಗೆ ಪ್ರಯತ್ನ ನಡೆಯುತ್ತಿರುವ ವಿಷಯ ತಿಳಿದು ತುಂಬಾ ಬೇಸರವಾಗಿದೆ ಅವರು ಒಬ್ಬ ಒಳ್ಳೆಯ ಪೊಲೀಸ್ ಅಧಿಕಾರಿಯಾಗಿದ್ದು ನಮ್ಮ ಜಿಲ್ಲೆಗೆ ಅವರ ಅಗತ್ಯತೆ ಇದ್ದು ಅವರನ್ನು ವರ್ಗಾವಣೆ ಮಾಡುವುದಕ್ಕೆ ತಮ್ಮ ವಿರೋಧವಿದೆ ಎಂದು ತಿಳಿಸಿದರು.
ಯುವ ಹೋರಾಟಗಾರ ಮಹೇಶ ಗೌಡ ಮಾತನಾಡಿ ಪದ್ಮಶ್ರೀ ಸುಕ್ರಿ ಗೌಡ ಅವರು ಬಡಗೇರಿ ಸುತ್ತ ಮುತ್ತ ಸರಾಯಿ ವಿರೋಧಿ ಹೋರಾಟ ನಡೆಸುತ್ತಾ ಬಂದಿದ್ದು ತುಳಸಜ್ಜಿ ಸಹ ದುಶ್ಚಟಗಳ ವಿರುದ್ಧ ಧ್ವನಿ ಎತ್ತುತ್ತಾ ಬಂದಿದ್ದಾರೆ ಎಸ್. ಪಿ ಪನ್ನೇಕರ್ ಅವರು ಇಂಥ ಹಲವಾರು ಹೋರಾಟಗಾರರ ಮನೋಬಲ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಅವರಿಗೆ ನಮ್ಮ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಸಿಗಬೇಕು ಎಂದರು.
ಶೇಖರ ಗೌಡ, ಅರುಣ ಗೌಡ, ರಮಾಕಾಂತ ಗೌಡ, ಚಂದ್ರಕಾಂತ ಗೌಡ, ಗೋವಿಂದರಾಯ, ವಸಂತ, ಚಂದ್ರಹಾಸ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!