Tuesday, August 16, 2022

Latest Posts

8.5 ಕೋ. ವೆಚ್ಚದಲ್ಲಿ ಬೈಂದೂರು ಮಿನಿ ವಿಧಾನಸೌಧ ಕಾಮಗಾರಿಗೆ ಶಾಸಕ ಸುಕುಮಾರ ಶೆಟ್ಟಿ ಚಾಲನೆ

ಹೊಸ ದಿಗಂತ ವರದಿ, ಬೈಂದೂರು

ಈಗ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಮುಂದಿನ ಒಂದೂವರೆ ವರ್ಷ ದೊಳಗೆ ಲೋಕಾರ್ಪಣೆಗೊಳ್ಳಲಿದೆ.  ಇದುವರೆಗೆ ಬೈಂದೂರು ಕ್ಷೇತ್ರಕ್ಕೆ ಸುಮಾರು 1680 ಕೋಟಿ ಅನುದಾನ ಬಂದಿದ್ದು, ಅಭಿವೃದ್ಧಿಯಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.

ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಈ ಹಿಂದೆ ಶಿಲಾನ್ಯಾಸ ಮಾಡಿರುವ ಸುಮಾರು 8.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬೈಂದೂರು ನೂತನ ಮಿನಿ ವಿಧಾನಸೌಧ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಬೈಂದೂರು, ಕೊಲ್ಲೂರು, ಮರವಂತೆಯನ್ನು ಗಮನದಲಿಟ್ಟುಕೊಂಡು ಪ್ರವಾಸೋದ್ಯಮಕ್ಕೆ ಯೋಜನೆಯನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ಬೈಂದೂರನ್ನು ಮಾದರಿ ಪ್ರವಾ ಸೋದ್ಯಮ ಕ್ಷೇತ್ರವನ್ನಾಗಿ ಮಾಡಲಾಗುತ್ತದೆ.

550 ಕೋಟಿ ವೆಚ್ಚದಲ್ಲಿ ಬೈಂದೂರು ಕ್ಷೇತ್ರದ ಪ್ರತಿ ಮನೆಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುತ್ತದೆ. ಮುಖ್ಯಮಂತ್ರಿಗಳು ಹಾಗೂ ಸಂಸದರ ಮತ್ತು ಸಚಿವರ ಸಹಾಯದಿಂದ ಅನುದಾನ ಸಿಕ್ಕಿದೆ. ಕೃಷಿಗೆ ನೀರಿನ ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಂದಾಜು ರೂ.200 ಕೋಟಿ ವೆಚ್ಚದಲ್ಲಿ ಹಲವು ಕಡೆಗಳಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣವಾಗಿದ್ದು, ಇನ್ನು ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ.

ಆರೋಗ್ಯ ಇಲಾಖೆಯಿಂದ ಬೈಂದೂರು ಕ್ಷೇತ್ರಕ್ಕೆ ಎರಡು 108ವಾಹನ ಮಂಜೂರಾಗಿದೆ. ಗ್ರಾಮೀಣ ಪ್ರದೇಶದ ಹೆಚ್ಚಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಮೀನಗಾರಿಕಾ ಇಲಾಖೆಯಿಂದ 150 ಕೋಟಿ ಅನುದಾನ ಲಭಿಸಿದ್ದು, ಈಗಾಗಲೇ ಜಟ್ಟಿ ನಿರ್ಮಾಣ, ಬಂದರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಬೈಂದೂರು ತಾಲೂಕು ಆಸ್ಪತ್ರೆಗೆ ರೂ.25 ಕೋಟಿ ಹಾಗೂ ಸುಬ್ಬರಾಡಿ ವೆಂಟೆಂಡ್ ಡ್ಯಾಮ್ ಹೆಚ್ಚುವರಿಯಾಗಿ ರೂ.30 ಕೋಟಿ ಅನುದಾನ ದೊರೆತಿದೆ ಎಂದು ನುಡಿದರು.

ತಹಶೀಲ್ದಾರ್ ಕಿರಣ್ ಗೌರಯ್ಯ, ಜಿ.ಪಂ ಸದಸ್ಯರಾದ ಕೆ. ಬಾಬು ಶೆಟ್ಟಿ, ಶಂಕರ ಪೂಜಾರಿ, ಸುರೇಶ ಬಟ್ವಾಡಿ, ಬೈಂದೂರು ತಾ.ಪಂ. ಅಧ್ಯಕ್ಷ ಮಹೇಂದ್ರ ಪೂಜಾರಿ, ಉಪಾಧ್ಯಕ್ಷೆ ಮಾಲಿನಿ ಕೆ., ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಸದಸ್ಯೆ ಸುಜಾತಾ ದೇವಾಡಿಗ, ಗುತ್ತಿಗೆದಾರ ಸುಜಯ್ ಉಪಸ್ಥಿತರಿದ್ದರು.

ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ನೆಲ್ಯಾಡಿ ದೀಪಕ್‌ಕುಮಾರ್ ಶೆಟ್ಟಿ ಸ್ವಾಗತಿಸಿ, ಎ. ಆನಂದ ಖಾರ್ವಿ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss