ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………
ಹೊಸದಿಗಂತ ವರದಿ, ಮಂಡ್ಯ:
ಕೋವಿಡ್ 2ನೇ ಅಲೆ ತೀವ್ರವಾಗಿ ಮಂಡ್ಯ ಜಿಲ್ಲೆಯಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚುತ್ತಿರುವುದು, ಆಕ್ಸಿಜೆನ್ ಮತ್ತು ವೆಂಟಿಲೇಟರ್ ಸಮಸ್ಯೆ ಎದುರಾಗುತ್ತಿದ್ದರೂ ಸ್ಪಂಧಿಸದ ಕಾರಣ ಜಿಲ್ಲೆಯ ಜನರ ಟೀಕೆಗಳಿಂದ ಎಚ್ಚೆತ್ತ ಸಂಸದೆ ಸುಮಲತಾ ಅವರು ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿಗಳೊಂದಿಗೆ ಸೋಮವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದುಕೊಂಡರು.
ಎಷ್ಟು ಮಂದಿ ಕೋವಿಡ್ನಿಂದ ಬಳಲುತ್ತಿದ್ದಾರೆ. ಮಿಮ್ಸ್ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಘಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೈಗೊಳ್ಳಲಾಗಿರುವ ಸೌಲಭ್ಯಗಳು, ಹಾಸಿಗೆಗಳು, ಆಕ್ಸಿಜೆನ್ ಹಾಸಿಗೆಗಳು, ವೆಂಟಿಲೇಟರ್ಯುಕ್ತ ಹಾಸಿಗೆಗಳು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ರೋಗಿಗಳಿಗೆ ತಕ್ಕಂತೆ ಆಕ್ಸಿಜೆನ್ ಪೂರೈಕೆ ಆಗುತ್ತಿದೆಯೇ, ತಾಲೂಕು ಆಸ್ಪತ್ರೆಗಳಿಗೆ ಆಕ್ಸಿಜೆನ್ ಕೊರತೆ ಎದುರಾಗಿದೆಯೇ, ಮಿಮ್ಸ್ ಆಸ್ಪತ್ರೆಗೆ ಅಗತ್ಯ ಆಮ್ಲಜನಕ ಎಷ್ಟು ಬೇಕಾಗಿದೆ ಇತ್ಯಾದಿ ಮಾಹಿತಿಗಳನ್ನು ಪಡೆದರು.
ಹೆಚ್ಚುವರಿ ಆಕ್ಸಿಜೆನ್ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಸೌಲಭ್ಯ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಯಾವುದೇ ಸಂದರ್ಭದಲ್ಲೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವುದು, ಆಸ್ಪತ್ರಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳು, ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಎಸ್. ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಂ.ಅಶ್ವಿನಿ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವ್ಯ ಪ್ರಭು, ಮಿಮ್ಸ್ ನಿರ್ದೇಶಕ ಡಾ. ಎಂ.ಆರ್. ಹರೀಶ್, ಜಿಲ್ಲಾ ಆರೋಗ್ಯಧಿಕಾರಿ ಡಾ ಎಚ್.ಪಿ. ಮಂಚೇಗೌಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಧಿತರಿದ್ದರು.