ಹೊಸದಿಗಂತ ಆನ್ ಲೈನ್ ಡೆಸ್ಕ್:
ಕಾಂಗ್ರೆಸ್ನ ಹಿರಿಯ ನಾಯಕ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನಲ್ಲಿ ಶಶಿ ತರೂರ್ ವಿರುದ್ಧ ಕೇಳಿಬಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಆದೇಶ ಕಾಯ್ದಿರಿಸಿದೆ.
ದೆಹಲಿ ಪೊಲೀಸ್ ಮತ್ತು ತರೂರ್ ಪರ ವಕೀಲರ ವಾದ ಪ್ರತಿವಾದಗಳನ್ನು ಕೋರ್ಟ್ ಆಲಿಸಿದ್ದು, ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್ ಅವರು ಏಪ್ರಿಲ್ 29 ರಂದು ಆದೇಶ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ.
ವಾದ ಮಂಡನೆ ವೇಳೆ ಶಶಿ ತರೂರ್ ವಿರುದ್ಧ ಸೆಕ್ಷನ್ 306 ಅಡಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪರಿಗಣಿಸುವಂತೆ ಪೊಲೀಸರ ಪರ ವಕೀಲರು ನ್ಯಾಯಾಲಯವನ್ನು ಕೋರಿದರು. ಪ್ರತಿವಾದ ಮಂಡಿಸಿದ ತರೂರ್ ಪರ ವಕೀಲರು, ಈಗಾಗಲೇ ಎಸ್ಐಟಿ ತನಿಖೆ ನಡೆದಿದ್ದು, ತರೂರ್ ವಿರುದ್ಧ ಆರೋಪ ಸಾಬೀತುಪಡಿಸುವ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ತಿಳಿಸಿದರು.
ಅಲ್ಲದೇ ಶಶಿ ತರೂರ್ ಪರ ವಕೀಲ ವಿಕಾಸ್ ಪಾಹ್ವ ಅವರು ಪ್ರಕರಣದಿಂದ ಶಶಿ ತರೂರ್ ಅವರನ್ನು ಕೈಬಿಡಬೇಕು. ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಜನವರಿ 17, 2014 ರ ರಾತ್ರಿ ಸುನಂದಾ ಪುಷ್ಕರ್ ಅವರು ದೆಹಲಿಯ ಐಷಾರಾಮಿ ಹೋಟೆಲ್ನ ಸೂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ತರೂರ್ ಅವರ ಮನೆ ನವೀಕರಣಗೊಳ್ಳುತ್ತಿದ್ದ ಹಿನ್ನೆಲೆ ದಂಪತಿ ಹೋಟೆಲ್ನಲ್ಲಿ ತಂಗಿದ್ದರು. ಪತ್ನಿ ಅಸಹಜ ಸಾವಿನ ಹಿನ್ನೆಲೆ ತರೂರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಮತ್ತು 306 ರ ಅಡಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು, ಆದರೆ, ಅವರನ್ನು ಬಂಧಿಸಿರಲಿಲ್ಲ. ಜುಲೈ 5, 2018 ರಂದು ತರೂರ್ಗೆ ನ್ಯಾಯಾಲಯ ಜಾಮೀನು ನೀಡಿತ್ತು.