ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಸೋಮವಾರ ತಡರಾತ್ರಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಭಾರತಕ್ಕೆ ಗೂಗಲ್‌ನ ಬದ್ಧತೆಯ ಕುರಿತ ಸಭೆಗೆ ಸುಂದರ್ ಪಿಚೈ ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದರು. ಸಭೆಯಲ್ಲಿ ಮೋದಿ ಹಾಗೂ ಪಿಚೈ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವ ಗೂಗಲ್‌ನ ಯೋಜನೆಯನ್ನು ಚರ್ಚಿಸಿದರು. ಭಾರತದಲ್ಲಿ ʻಕ್ರೋಮೋಬುಕ್ʼ ತಯಾರಿಕೆಯಲ್ಲಿ ಹೆಚ್‌ಪಿ ಜೊತೆಗಿನ ಗೂಗಲ್ ಪಾಲುದಾರಿಕೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.
“ಭಾರತಕ್ಕೆ ಗೂಗಲ್‌ನ ಬದ್ಧತೆ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ನಾವು ನಮ್ಮ ಕಾರ್ಯಾಚರಣೆಯನ್ನು ಹೇಗೆ ವಿಸ್ತರಿಸುತ್ತಿದ್ದೇವೆ ಎಂಬುದನ್ನು ಚರ್ಚಿಸಲು ನಡೆದ ಇಂದಿನ ಸಭೆಗೆ ಧನ್ಯವಾದಗಳು” ಎಂದು ಸುಂದರ್ ಪಿಚೈ ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ ಬರೆದುಕೊಂಡಿದಾರೆ. ಈ ಸಂದರ್ಭದಲ್ಲಿ ಗೂಗಲ್‌ನ 100 ಭಾಷೆಗಳ ಉಪಕ್ರಮವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಭಾರತೀಯ ಭಾಷೆಗಳಲ್ಲಿ ಕೃತಕ ಬುದ್ಧಿಮತ್ತೆ ಉಪಕರಣಗಳು ಲಭ್ಯವಾಗುವಂತೆ ಮಾಡುವ ಪ್ರಯತ್ನಗಳನ್ನು ಮೋದಿ ಪ್ರೋತ್ಸಾಹಿಸಿದರು.
ಉತ್ತಮ ಆಡಳಿತಕ್ಕಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟೂಲ್‌ಗಳ ಮೇಲೆ ಕೆಲಸ ಮಾಡಲು ಪ್ರಧಾನಿ ಮೋದಿ ಗೂಗಲ್‌ಗೆ ಉತ್ತೇಜನ ನೀಡಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಹೊರಡಿಸಿದ ಹೇಳಿಕೆ ತಿಳಿಸಿದೆ. ಗುಜರಾತ್‌ನ ಇಂಟರ್‌ನ್ಯಾಶನಲ್ ಫೈನಾನ್ಸ್ ಟೆಕ್-ಸಿಟಿ, ಗಾಂಧಿನಗರದಲ್ಲಿ ತನ್ನ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ತೆರೆಯುವ ಗೂಗಲ್‌ನ ಯೋಜನೆಗಳನ್ನು ಪ್ರಧಾನಿ ಮೋದಿ ಸ್ವಾಗತಿಸಿದರು.
ಸುಂದರ್ ಪಿಚೈ ಅವರು ಗೂಗಲ್ ಪೇ, ಯುಪಿಐ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ಬಳಸಿಕೊಂಡು ಭಾರತದಲ್ಲಿ ಆರ್ಥಿಕತೆಯನ್ನು ಸುಧಾರಿಸುವ ಗೂಗಲ್‌ನ ಯೋಜನೆಗಳ ಬಗ್ಗೆ ಪ್ರಧಾನಿಗೆ ತಿಳಿಸಿದರು. ಭಾರತದ ಅಭಿವೃದ್ಧಿ ಪಥಕ್ಕೆ ಕೊಡುಗೆ ನೀಡಲು ಗೂಗಲ್‌ನ ಬದ್ಧತೆಯನ್ನು ಪಿಚೈ ಒತ್ತಿ ಹೇಳಿದರು. 2023 ಡಿಸೆಂಬರ್‌ನಲ್ಲಿ ಭಾರತದಿಂದ ನಡೆಯಲಿರುವ ಕೃತಕ ಬುದ್ಧಿಮತ್ತೆ ಶೃಂಗಸಭೆಯಲ್ಲಿ ಮುಂಬರುವ ಜಾಗತಿಕ ಪಾಲುದಾರಿಕೆಗೆ ಕೊಡುಗೆ ನೀಡುವಂತೆ ಪ್ರಧಾನಿ ಮೋದಿ ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಅವರನ್ನು ಆಹ್ವಾನಿಸಿದ್ದಾರೆ.