14ರ ಪುಟ್ಟ ಹುಡುಗಿ ಪಿಸ್ತೂಲು ಹೊರಗೆದು ಹಣೆಗೆ ಗುರಿಯಿಟ್ಟಾಗ ಬ್ರಿಟೀಷ್ ಮ್ಯಾಜಿಸ್ಟ್ರೇಟ್ ಹೆದರಿ ಬೆವತಿದ್ದ…

ಹೊಸದಿಗಂತ ಡಿಜಿಟಲ್‌ ಡೆಸ್ಕ್
ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ಸಿಂಗಾಪುರದಲ್ಲಿ  ಐಎನ್‌ಎ ಸೇನೆಯ (ಭಾರತೀಯ ರಾಷ್ಟ್ರೀಯ ಸೇನೆ) ರಾಣಿ ಝಾನ್ಸಿ ಸೇನಾಪಡೆಯ ಮಹಿಳಾ ಯೋಧರನ್ನು ಉದ್ದೇಶಿಸಿ ಮಾತನಾಡುವಾಗ ಇಬ್ಬರು ಕೆಚ್ಚೆದೆಯ ಶಾಲಾ ಬಾಲಕಿಯರ ಹೆಸರುಗಳನ್ನು ಉಲ್ಲೇಖಿಸಿ ಅವರಿಬ್ಬರು ʼಭಾರತೀಯ ಮಹಿಳೆಯರ ಧೈರ್ಯ, ಶಕ್ತಿ, ವೀರತ್ವದ ಸಂಕೇತʼ ಎಂದು ಬಣ್ಣಿಸಿದ್ದರು.
ನೇತಾಜಿಯವರ ಮೆಚ್ಚುಗೆಗೆ ಪಾತ್ರರಾಗಿದ್ದ ಆ ಇಬ್ಬರು ಬಾಲಕಿಯರೆಂದರೆ ಸುನೀತಿ ಚೌಧುರಿ ಮತ್ತು ಶಾಂತಿ ಘೋಷ್. ಉಮಾಚರಣ್ ಚೌಧುರಿಯವರ ಪುತ್ರಿ ಸುನೀತಿ ಅವಿಭಜಿತ ಬಂಗಾಳದ ಕೊಮಿಲ್ಲಾ ಗ್ರಾಮದಲ್ಲಿ 1917ರಲ್ಲಿ ಜನಿಸಿದಳು. ಪಟ್ಟಣದ ಫೈಝುನ್ನೀಸಾ ಶಾಲೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗಲೇ ಅವಳು ಮತ್ತು ಅವಳ ಸಹಪಾಠಿ ಶಾಂತಿ ಕ್ರಾಂತಿಕಾರಿ ಯುಗಂತರ್ ಗುಂಪಿಗೆ ಸೇರ್ಪಡೆಯಾದರು. ಕ್ರಾಂತಿಕಾರಿ ಹೋರಾಟಗಾರ್ತಿ ಪ್ರೀತಿಲತಾ ಬ್ರಹ್ಮ ಈ ಹುಡುಗಿಯರಿಗೆ ಪ್ರೇರಣೆಯಾಗಿದ್ದರು. 1931ರಲ್ಲಿ ಪ್ರೀತಿಲತಾ ಅವರು ಸುನೀತಿ, ಶಾಂತಿ ಹಾಗೂ ಇತರೆ  ಹುಡುಗಿಯರಿದ್ದ ʼಛತ್ರಿ ಸಂಘʼ ಎಂಬ ಸಂಘಟನೆಯೊಂದನ್ನು ಹುಟ್ಟುಹಾಕಿದರು. ಕ್ರಾಂತಿಕಾರಿ ಬರುನ್ ಭಟ್ಟಾಚಾರ್ಯರಿಂದ ಈ ಹುಡುಗಿಯರಿಗೆ ತರಬೇತಿ ಕೊಡಿಸಿ ಪಿಸ್ತೂಲ್ ಶೂಟಿಂಗ್ ಮತ್ತು ಇತರ ಸಮರ ಕಲೆಗಳನ್ನು ಕಲಿಸಲಾಯಿತು.
ಡಿಸೆಂಬರ್ 14,  1931.. ಈ ದಿನ ಪಶ್ಚಿಮ ಬಂಗಾಳ ಭಾರತದ ಇತಿಹಾಸದಲ್ಲಿ ಮಹತ್ವದ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ಹದಿನೈದು ವರ್ಷದ ಬಾಲಕಿ ಸುನೀತಿ 14 ರ ಹರೆಯದ ಶಾಂತಿಯೊಂದಿಗೆ ಪಿಸ್ತೂಲು ಹಿಡಿದು ಬಂಗಾಳದ ಬ್ರಿಟೀಷ್ ಮ್ಯಾಜಿಸ್ಟ್ರೇಟ್ ಸ್ಟೀವನ್ಸ್ ರ ಬಂಗಲೆಗೆ ಹೋದರು. ಸ್ಟೀವನ್ಸ್‌ ಗೆ ಅಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಮುನ್ನವೇ ಗುಂಡು ಸ್ಫೋಟಿಸಿತ್ತು. ಶಾಂತಿ ಆತನನ್ನು ಪಾಯಿಂಟ್-ಬ್ಲಾಂಕ್ ರೇಂಜ್‌ ನಲ್ಲಿ ಗುಂಡಿಕ್ಕಿ ಕೊಂದಿದ್ದಳು. ಈ ವಿಚಾರ ತಿಳಿಯುತ್ತಿದ್ದಾಂತೆ ಬ್ರಿಟೀಷ್‌ ಆಡಳಿತ ಬೆಚ್ಚಿಬಿತ್ತು.  ಬ್ರಿಟೀಷ್‌ ಸರ್ಕಾರದ ಪ್ರಮುಖ ಹುದ್ದೆಯಲ್ಲಿದ್ದ ಅಧಿಕಾರಿಯನ್ನು ಇಬ್ಬರು ಪುಟ್ಟ ಬಾಲಕಿಯರು ಹೀನಾಯವಾಗಿ ಕೊಂದು ಹಾಕಿದ್ದರು. ಸೂರ್ಯ ಮುಳುಗದ ಸಾಮ್ರಾಜ್ಯ ಕಟ್ಟಿದ್ದೇವೆ ಎಂದು ಮೆರೆಯುತ್ತಿದ್ದ ಬಿಟ್ರೀಷರ ಪ್ರತಿಷ್ಠೆಗೆ ದೊಡ್ಡ ಹೊಡೆತ ಬಿದ್ದಿತ್ತು.
ಅಧಿಕಾರಿಗಳ ಪಡೆಗಳೇ ಈ ಬಾಲಕಿಯರ ಹಿಂದೆ ಬಿದ್ದವು. ಬಾಲಕಿಯರು ವಯಸ್ಸಿನ ಕಾರಣದಿಂದಾಗಿ ಮರಣದಂಡನೆಯಿಂದ ಪಾರಾದರು. ಆದರೆ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಮಿಡ್ನಾಪುರದ ಕೇಂದ್ರ ಕಾರಾಗೃಹದಲ್ಲಿ ಮೂರನೇ ದರ್ಜೆಯ ಕೈದಿಗಳಾಗಿ ಎಲ್ಲಾ ರೀತಿಯ ದೈಹಿಕ ಚಿತ್ರಹಿಂಸೆಗೆ ಒಳಗಾದರು.
1939 ರಲ್ಲಿ ಬಿಡುಗಡೆಯಾದ ಸುನೀತಿ ತನ್ನ ಅಧ್ಯಯನವನ್ನು ಪುನರಾರಂಭಿಸಿ ಅಂತಿಮವಾಗಿ ವೈದ್ಯೆಯಾಗಿ ಹೊರಹೊಮ್ಮಿದಳು.  ಬಡ ಮತ್ತು ನೊಂದ ವ್ಯಕ್ತಿಗಳಿಗೆ ತನ್ನ ನಿಸ್ವಾರ್ಥ ಮತ್ತು ಸಹಾನುಭೂತಿಯ ಸೇವೆಯಿಂದ ಪ್ರಖ್ಯಾತಳಾದಳು. 1947 ರಲ್ಲಿ ಆಕೆ ಟ್ರೇಡ್ ಯೂನಿಯನ್ ನಾಯಕ ಪ್ರದ್ಯೋತ್ ಕುಮಾರ್ ಘೋಷ್ ಅವರನ್ನು ವಿವಾಹವಾದರು. ಆ ಬಳಿಕ ಕುಟುಂಬದೊಂದಿಗೆ ತುಂಬು ಬಾಳು ಕಳೆದಿದ್ದ ಸುನೀತಿ ಚೌಧುರಿ 1988 ರಲ್ಲಿ ಇಹಲೋಕ ತ್ಯಜಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!