ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ, ಕೋಲಾರ:
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎನ್.ವಿಜಯಕುಮಾರ್ ಆದಾಯಕ್ಕಿಂತಲೂ 343 ಪಟ್ಟು ಹೆಚ್ಚಿನ ಅಕ್ರಮ ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಿದೆ.
ಡಾ.ವಿಜಯಕುಮಾರ್ ಆದಾಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಆಕ್ರಮ ಆಸ್ತಿಯನ್ನು ಹೊಂದಿದ್ದಾರೆಂಬ ಬಗ್ಗೆ ಭ್ರಷ್ಟಾಚಾರ ನಿಗ್ರಹದಳದಲ್ಲಿ 2021, -.1 ರಂದು ದೂರು ದಾಖಲಾಗಿತ್ತು. ತನಿಖೆಯಲ್ಲಿ ವೈದ್ಯಾಧಿಕಾರಿಯು 1.79 ಕೋಟಿ ಆದಾಯವನ್ನು ಹೊಂದಿದ್ದು, 1.26 ಕೋಟಿ ಖರ್ಚನ್ನು ತೋರಿಸಿದ್ದರು. ಆದರೆ, ಒಟ್ಟು ಆಸ್ತಿಯಮೌಲ್ಯ 6.69 ಕೋಟಿ ರೂಗಳಾಗಿತ್ತು. ಇದು ಆದಾಯಕ್ಕಿಂತಲೂ ಶೇ.343 ರಷ್ಟು ಹೆಚ್ಚಿನ ಅಕ್ರಮ ಆಸ್ತಿಯನ್ನು ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು.
ಇವರನ್ನು ಈಗಿರುವ ಹುದ್ದೆಯಲ್ಲೇ ಮುಂದುವರೆಸಿದರೆ ಸಾಕ್ಷ್ಯಾಧಾರಗಳನ್ನುನಾಶಪಡಿಸುವ, ತಿರುಚುವ ಸಾಧ್ಯತೆಗಳು ಇರುವುದರಿಂದ ಇವರ ಸೇವೆಯನ್ನು ಅಮಾನತ್ತುಪಡಿಸಿ ಲೀನ್ ಬದಲಾವಣೆ ಮಾಡಿ ಇಲಾಖಾ ವಿಚಾರಣೆ ಕೈಗೊಳ್ಳುವಂತೆ ಸರಕಾರ ತೀರ್ಮಾನಿಸಿ ಆದೇಶಿಸಿದೆ.
ಅಮಾನತ್ತು ಅವಧಿಯಲ್ಲಿ ಡಾ.ವಿಜಯಕುಮಾರ್ ವಿರುದ್ಧ ಶಿಸ್ತುಕ್ರಮ, ಕ್ರಿಮಿನಲ್ ಪ್ರಕರಣ ಬಾಕಿ ಇರಿಸಿದ್ದು, ಇವರಿಗೆ ರಾಮನಗರ ಜಿಲ್ಲಾಸ್ಪತ್ರೆ ಇಲ್ಲಿ ಖಾಲಿ ಇರುವ ವೈದ್ಯಾಧಿಕಾರಿ ಹುದ್ದೆಯಲ್ಲಿ ಲೀನ್ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಅಧಿನ ಕಾರ್ಯದರ್ಶಿ ಎಂ.ಕುಮಾರಸ್ವಾಮಿ ರಾಜ್ಯಪಾಲರ ಆದೇಶಾನುಸಾರ ಆದೇಶ ಹೊರಡಿಸಿದ್ದಾರೆ.