ರೈತರ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಸಿ: ಭನ್ವರ್ ಸಿಂಗ್ ಮೀನಾ

ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಲಿದ್ದು, ರೈತರ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಸಲು ಅಗತ್ಯ ಕ್ರಮವಹಿಸುವಂತೆ ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಸೂಚಿಸಿದ್ದಾರೆ.
ನಗರದ ಜಿ.ಪಂ.ಸಭಾಂಗಣದಲ್ಲಿ ರಸಗೊಬ್ಬರ ಪೂರೈಕೆ ಮತ್ತು ದಾಸ್ತಾನು ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು.
ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಒಗಳು ಕಾಲ ಕಾಲಕ್ಕೆ ಬೇಡಿಕೆ ಇರುವ ರಸಗೊಬ್ಬರಗಳನ್ನು ಪೂರೈಸಿಕೊಳ್ಳಲು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸಿಇಒ ಅವರು ಹೇಳಿದರು.
ರೈತರಿಗೆ ರಸಗೊಬ್ಬರ ಎಷ್ಟು ಬೇಡಿಕೆ ಇದೆ. ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಎಷ್ಟು ರಸಗೊಬ್ಬರ ಬೇಕಿದೆ ಎಂಬುದನ್ನು ಖಚಿತಪಡಿಸಿಕೊಂಡು ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಜಿ.ಪಂ.ಸಿಇಒ ಅವರು ಹೇಳಿದರು.
ರಸಗೊಬ್ಬರ ಪೂರೈಸುವಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು. ಸಮಸ್ಯೆಗಳಿದ್ದಲ್ಲಿ ಮಾಹಿತಿ ನೀಡುವಂತಾಗಬೇಕು ಎಂದು ಜಿ.ಪಂ.ಸಿಇಒ ಅವರು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಷೇಕ್ ಅವರು ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ರಸಗೊಬ್ಬರ ಎಷ್ಟು ಬೇಡಿಕೆ ಇದೆ. ಕಳೆದ ವರ್ಷ ಎಷ್ಟು ಪೂರೈಕೆಯಾಗಿ ಎಷ್ಟು ಮಾರಾಟವಾಗಿತ್ತು ಎಂಬುದನ್ನು ಗಮನಿಸಿ ಎರಡು ತಿಂಗಳ ಮುಂಚಿತವಾಗಿ ರಸಗೊಬ್ಬರ ಪೂರೈಸಿಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಹಾಸನ ಜಿಲ್ಲೆಯಿಂದ ರಸಗೊಬ್ಬರ ಪೂರೈಕೆಯಾಗುವುದರಿಂದ ಮುಂಗಡವಾಗಿ ಹಣ ಪಾವತಿಸಿ ರಸಗೊಬ್ಬರ ಪೂರೈಸಿಕೊಳ್ಳಲು ಮುಂದಾಗಬೇಕು. ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಯಾವುದೇ ರೀತಿಯಲ್ಲಿ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಪ್ರತಿ ತಿಂಗಳು ಎಷ್ಟು ರಸಗೊಬ್ಬರ ಬೇಕು ಎಂಬ ಬಗ್ಗೆ ಎರಡು ತಿಂಗಳ ಮುಂಚಿತವಾಗಿ ಇಂಡೆಂಟ್ ನೀಡಬೇಕು ಎಂದು ಶಬಾನಾ ಎಂ.ಷೇಕ್ ಅವರು ಹೇಳಿದರು.
ಜಿಲ್ಲೆಗೆ ಬರಬೇಕಿರುವ ರಸಗೊಬ್ಬರವನ್ನು ತರಿಸಿಕೊಳ್ಳಲು ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ಕೃಷಿ ಇಲಾಖೆಯು ಸಮನ್ವಯತೆಯಿಂದ ಕಾರ್ಯನಿರ್ವಹಿಸಲಿದೆ ಎಂದು ಅವರು ನುಡಿದರು.
ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಒಬ್ಬರು ಮಾತನಾಡಿ, ಹಾಸನ ಜಿಲ್ಲೆಯಿಂದ ರಸಗೊಬ್ಬರ ತರಿಸಿಕೊಳ್ಳುವುದರಿಂದ ಹೆಚ್ಚುವರಿ ಬಾಡಿಗೆ ಭರಿಸಬೇಕಾಗುತ್ತದೆ. ಇದರಿಂದ ರೈತರಿಗೆ ಹೊರೆಯಾಗುತ್ತದೆ ಎಂದರು.
ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಅವರು ಸಹಕಾರ ಇಲಾಖೆಯ ಕಾರ್ಯಕ್ರಮಗಳು, ಪ್ರಗತಿ ಸಂಬಂಧ ಮಾಹಿತಿ ಪಡೆದರು. ಸಹಾಯಕ ನಿಬಂಧಕ ಮೋಹನ್ ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!