ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ವಿವಿಧ ಸಂಘಟನೆಗಳಿಂದ ಬೆಂಬಲ: ರಮೇಶ್

ಮಡಿಕೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಮಾ.28 ಮತ್ತು 29 ರಂದು ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕೊಡಗು ಜಿಲ್ಲಾ ಜಂಟಿ ಕ್ರಿಯಾ ಸಮಿತಿ ಬೆಂಬಲ ವ್ಯಕ್ತಪಡಿಸಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಕೊಡಗು ಜಿಲ್ಲಾ ಜಂಟಿ ಕ್ರಿಯಾ ಸಮಿತಿಯ (ಜೆಸಿಟಿಯು) ಸಂಚಾಲಕ ಹೆಚ್.ಬಿ.ರಮೇಶ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನ ವಿರೋಧಿ ನೀತಿ, ಕಾರ್ಪೋರೇಟ್ ಪರ ಮತ್ತು ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ಹಾಗೂ ಪಾರ್ಲಿಮೆಂಟ್‍ನಲ್ಲಿ 4 ಕಾರ್ಮಿಕ ಸಂಹಿತೆಗಳ ರದ್ಧತಿಗಾಗಿ ಮಂಡಿಸಿರುವ ಖಾಸಗಿ ಮಸೂದೆಯನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ಮುಷ್ಕರ ಹಮ್ಮಿಕೊಂಡಿದ್ದು, ಮಾ.28 ರಂದು ಮಡಿಕೇರಿ, ವೀರಾಜಪೇಟೆ ಹಾಗೂ ಕುಶಾಲನಗರದಲ್ಲಿ ಮುಷ್ಕರ ನಡೆಯಲಿದೆ. ಮಾ.29 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಮಟ್ಟದ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಹತ್ತು ಹಲವು ಬೇಡಿಕೆ: ನಿವೇಶನ ರಹಿತ ಕಾರ್ಮಿಕರಿಗೆ ನಿವೇಶನ ಒದಗಿಸಬೇಕು, ವನ್ಯ ಪ್ರಾಣಿಗಳ ಹಾವಳಿ ತಡೆಗಟ್ಟಬೇಕು, ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕಾರ್ಮಿಕ ನ್ಯಾಯಾಲಯ ಸ್ಥಾಪನೆಯಾಗಬೇಕು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದರು.
ಜಿಲ್ಲೆಯ ಕಾರ್ಮಿಕರು, ನೌಕರರು, ರೈತರು, ಮಹಿಳೆಯರು, ದಲಿತರು, ವಿದ್ಯಾರ್ಥಿಗಳು, ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ ಸೋಮಪ್ಪ ಮಾತನಾಡಿ, ದುಡಿಯುವ ವರ್ಗದವರ ಹಲವು ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದೆ ದುಡಿಯುವ ವರ್ಗವನ್ನು ಮೂಲೆಗುಂಪು ಮಾಡಿದೆ ಎಂದು ದೂರಿದರು.
ಗ್ರಾ.ಪಂ ನೌಕರರ ಸಂಘಟನೆ ಜಿಲ್ಲಾಧ್ಯಕ್ಷ ಪಿ.ಆರ್ ಭರತ್ ಮಾತನಾಡಿ, ರಾಜ್ಯ ಬಜೆಟ್‍ನಲ್ಲಿ ಕೊಡಗಿನ ಎಲ್ಲಾ ವರ್ಗದವರ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಬದಲಾಗಿ ಯಾವುದೋ ಒಂದು ಸಮುದಾಯವನ್ನು ತೃಪ್ತಿಪಡಿಸಲು ಅನುದಾನ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಹಲವು ಜ್ವಲಂತ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿದೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಬದಲು ಇರುವ ಕಾನೂನುಗಳನ್ನು ಬದಲಾಯಿಸಿ, ಮಂಡಳಿಗಳನ್ನು ದುರ್ಬಲಗೊಳಿಸಿ, ಸೌಲಭ್ಯಗಳನ್ನು ಮೊಟಕುಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ ಅವರು, ಅಂಗನವಾಡಿ, ಆಶಾ, ಬಿಸಿಯೂಟ ಮತ್ತು ಇತರೆ ಸ್ಕೀಂ ನೌಕರರಿಗೆ ಶಾಸನಬದ್ಧ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!