ಸ್ವಾಭಿಮಾನದ ನಡಿಗೆ ರಾಜಕೀಯ ರಹಿತವಾಗಿದ್ದರೆ ಮಾತ್ರ ಬೆಂಬಲ: ಬಿರುವೆರ್ ಕುಡ್ಲ

ಹೊಸದಿಗಂತ ವರದಿ,ಮಂಗಳೂರು:

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆ ಹಿನ್ನೆಲೆಯಲ್ಲಿ ಜ.೨೬ರಂದು ನಡೆಸಲು ಉದ್ದೇಶಿಸಿರುವ ಸ್ವಾಭಿಮಾನ ಜಾಥಾ ರಾಜಕೀಯ ರಹಿತವಾಗಿದ್ದರೆ ಮಾತ್ರ ಬೆಂಬಲ ನೀಡುವುದಾಗಿ ಬಿರುವೆರ್ ಕುಡ್ಲ ಸಂಘಟನೆ ತಿಳಿಸಿದೆ.
ನಗರದ ವೃತ್ತಕ್ಕೆ ನಾರಾಯಣ ಗುರುಗಳ ಹೆಸರಿಡುವಂತೆ ಆಗ್ರಹಿಸಿ ಬಿರುವೆರ್ ಕುಡ್ಲ ಸಂಘಟನೆ ಪ್ರತಿಭಟನೆ ನಡೆಸಿದಾಗ ಬೆಂಬಲ ನೀಡದವರು ಇಂದು ಜಾಥಾದಲ್ಲಿರುವುದು ರಾಜಕೀಯದ ಹುನ್ನಾರದಂತೆ ಭಾಸವಾಗುತ್ತಿದೆ. ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂದು ಬೋಧಿಸಿದ ನಾರಾಯಣ ಗುರುಗಳ ಹೆಸರನ್ನು ಮುಂದಿಟ್ಟುಕೊಂಡು, ರಾಜಕೀಯ ಉದ್ದೇಶಕ್ಕಾಗಿ ಕೆಲವು ಪಕ್ಷಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವುದು ವಿಷಾದನೀಯ. ರಾಜಕೀಯ ಉದ್ದೇಶದ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ ಎಂದು ಬಿರುವೆರ್ ಕುಡ್ಲ ವಕ್ತಾರ ಲಕ್ಷ್ಮೀಶ ಸುವರ್ಣ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗಣರಾಜ್ಯೋತ್ಸವಕ್ಕಾಗಿ ಕೇರಳ ಸರಕಾರ ಕಳುಹಿಸಿದ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ಕಡೆಗಣಿಸಿದೆ ಎಂಬ ಆರೋಪದ ಮೂಲಕ ವಿವಾದ ಸೃಷ್ಟಿಸಿ ಹೇಗಾದರೂ ಮಾಡಿ ಅಧಿಕಾರ ಪಡೆಯಬೇಕೆಂಬ ಉದ್ದೇಶದಿಂದ ಇರುವ ಪಕ್ಷಗಳು ಜನರ ಮನಸ್ಸಿನಲ್ಲಿ ಗೊಂದಲ ಉಂಟು ಮಾಡಲೆತ್ನಿಸುತ್ತಿರುವುದು ಖಂಡನೀಯ ಎಂದರು.
ಸಂಘಟನೆ ಸದಸ್ಯೆ ಸಹನಾ ಕುಂದರ್ ಮಾತನಾಡಿ, ಗಣರಾಜ್ಯೋತ್ಸವ ದಿನದಂದು ದಿಲ್ಲಿಯ ರಾಜಪಥದಲ್ಲಿ ಸಾಗುವ ಟ್ಯಾಬ್ಲೊಗಳ ಆಯ್ಕೆಗಾಗಿ ಕೆಲವು ಮಾರ್ಗದರ್ಶಿ ಸೂತ್ರಗಳಿವೆ. ಕೇಂದ್ರ ಕಳುಹಿಸಿದ ಮಾರ್ಗದರ್ಶಿ ಸೂತ್ರಗಳನ್ನು ಕೇರಳ ನಿರ್ಲಕ್ಷ್ಯ ಮಾಡಿದೆ ಎಂದು ರಾಜ್ಯದ ಸಚಿವರು ಹೇಳಿದ್ದಾರೆ. ಯಾವ ಸೂತ್ರಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂಬುದನ್ನು ಸರಕಾರ ಸ್ಪಷ್ಟ ಪಡಿಸಿದರೆ ಈ ಗೊಂದಲ ಬಗೆಹರಿಯಲಿದೆ ಎಂದು ಹೇಳಿದರು.
ಬಿರುವೆರ್ ಕುಡ್ಲ ಸಂಘಟನೆ ಉಪಾಧ್ಯಕ್ಷ ರಾಕೇಶ್ ಸಾಲ್ಯಾನ್, ಮಹಿಳಾ ಘಟಕ ಅಧ್ಯಕ್ಷೆ ವಿದ್ಯಾ ರಾಕೇಶ್, ಕಿಶೋರ್ ಬಾಬು, ಪ್ರಾಣೇಶ್ ಬಂಗೇರ, ಕಿರಣ್, ರಕ್ಷಿತ್ ಸುವರ್ಣ ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!