ಶಿವಲಿಂಗ ರಕ್ಷಣೆಗೆ ಸುಪ್ರಿಂ ಕೋರ್ಟ್‌ ಸಮ್ಮತಿ: ಮುಸ್ಲೀಮರ ಅರ್ಜಿ ವಿಚಾರಣೆ ಮುಂದುವರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಗ್ಯಾನವಾಪಿ ಮಸೀದಿಯಲ್ಲಿ ವೀಡಿಯೋಗ್ರಫಿಗೆ ಆದೇಶಿಸಿರುವ ವಾರಣಾಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಸೀದಿಯ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್‌ ಮಧ್ಯಂತರ ಆದೇಶವೊಂದನ್ನು ನೀಡಿ ಪತ್ತೆಯಾಗಿದೆಯೆನ್ನಲಾಗಿರುವ ಶಿವಲಿಂಗವನ್ನು ರಕ್ಷಿಸುವಂತೆ ಹೇಳಿದೆ ಮತ್ತು ಮುಸ್ಲೀಮರ ಅರ್ಜಿಯ ಕುರಿತು ವಿಚಾರಣೆ ಮುಂದುವರಿಸಲಾಗುವುದು ಎಂದು ಹೇಳಿದೆ.

ವಾರಣಾಸಿ ಕೋರ್ಟ್‌ ಮಸೀದಿಯೊಳಗಡೆ ವೀಡಿಯೋಗ್ರಫಿ ಮಾಡಲು ನೀಡಿರುವ ಆದೇಶವು 1991ರ ಪೂಜಾ ಸ್ಥಳಗಳಿಗೆ ಸಂಬಂಧಪಟ್ಟ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಅಂಜುಮನ್‌ ಇಂತಿಜಾಮಿಯಾ ಮಸ್ಜಿದ್‌ ಸಮಿತಿಯು ಸುಪ್ರಿಂ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು ಸರ್ವೇಕ್ಷಣೆಯ ಸಂದರ್ಭದಲ್ಲಿ ಕಂಡುಬಂದಿದೆಯೆನ್ನಲಾದ ಶಿವಲಿಂಗವನ್ನು ರಕ್ಷಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡಿದೆ. ಹಾಗೂ ಶಿವಲಿಂಗದ ರಕ್ಷಣೆಯ ಸಂದರ್ಭದಲ್ಲಿ ಮುಸ್ಲೀಮರಿಗೆ ಪ್ರಾರ್ಥನೆಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದೆ.

ಈ ಹಿಂದೆ ಶಿವಲಿಂಗ ಪತ್ತೆಯಾಗಿರುವ ಸ್ಥಳವನ್ನು ಸಂಪೂರ್ಣವಾಗಿ ಸೀಲ್‌ ಮಾಡಿ ಜನರ ಪ್ರವೇಶವನ್ನು ನಿಷೇಧಿಸುವಂತೆ ವಾರಣಾಸಿ ಕೋರ್ಟ್ ಹೇಳಿತ್ತು. ಆದರೆ ಸುಪ್ರಿಂ ಕೋರ್ಟ್‌ ಈ ಆದೇಶವನ್ನು ತಡೆ ಹಿಡಿದು ಮುಸ್ಲೀಮರಿಗೆ ಪ್ರಾರ್ಥನೆಗೆ ಅವಕಾಶ ಕಲ್ಪಿಸಿದ್ದು ಶಿವಲಿಂಗವನ್ನು ರಕ್ಷಣೆ ಮಾಡವಂತೆಯೂ ಹೇಳಿದೆ.

ಇನ್ನು ವರದಿ ಸಲ್ಲಿಕೆಗೆ ಹೆಚ್ಚಿನ ಸಮಯಬೇಕು ಎಂದಿದ್ದ ಸರ್ವೇಕ್ಷಣಾ ಸಮಿತಿಗೆ ಎರಡು ದಿನಗಳ ಹೆಚ್ಚಿನ ಕಾಲಾವಕಾಶ ನೀಡಿದ್ದು ಮೇ 19ಕ್ಕೆ ವರದಿ ಸಲ್ಲಿಸುವಂತೆ ಆದೇಶ ನೀಡಿದೆ.

ಒಟ್ಟೂ ಸಾರಾಂಶ ಹೇಳುವುದಾದಲ್ಲಿ, ವಾರಾಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ವಿಡಿಯೊ ಸಮೀಕ್ಷೆ ಮಾಡಲು ನೀಡಿದ ಆದೇಶವೇ ಕಾನೂನುಬಾಹಿರವೇ ಎಂಬುದನ್ನು ಸುಪ್ರೀಂಕೋರ್ಟ್ ಇನ್ನು ಮುಂದಿನ ವಿಚಾರಣೆಯಲ್ಲಿ ಪರಿಶೀಲಿಸಲಿದೆ. ಆ ಬಗ್ಗೆ ತಡೆ ಅಥವಾ ತೀರ್ಪು ಕೊಡಬಹುದಾದ ಅವಕಾಶವನ್ನು ಇಟ್ಟುಕೊಂಡಿದೆ. ಆದರೆ ಸದ್ಯಕ್ಕೆ ಶಿವಲಿಂಗ ಎಂದು ಹಿಂದುಪಕ್ಷವು ವಾದಿಸಿರುವುದರ ರಕ್ಷಣೆಯೂ ಆಗಬೇಕು ಎಂಬ ತಾತ್ಕಾಲಿಕ ಆದೇಶ ಮಂಗಳವಾರದ ಸುಪ್ರೀಂಕೋರ್ಟ್ ಆದೇಶದಲ್ಲಿ ಅಡಕವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!