Tuesday, August 16, 2022

Latest Posts

ಶರಣ ಸಂಸ್ಕೃತಿ ಉಳಿದು ಬೆಳೆಯಲಿ: ಬಿ.ವೈ.ವಿಜಯೇಂದ್ರ

ಹೊಸದಿಗಂತ ವರದಿ,ಚಿತ್ರದುರ್ಗ:

ಬಸವಣ್ಣನವರು ಶರಣ ಸಂಸ್ಕೃತಿ ಹುಟ್ಟು ಹಾಕದಿದ್ದಿದ್ದರೆ ಇಡೀ ಮಾನವ ಸಂಸ್ಕೃತಿ ನಾಶವಾಗುತ್ತಿತ್ತು. ನಾವು ಮನುಷ್ಯರಾಗಿದ್ದೆವೆಂದರೆ ಅದಕ್ಕೆ ಕಾರಣ ಶರಣ ಸಂಸ್ಕೃತಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.
ಇಲ್ಲಿನ ಮುರುಘಾ ಮಠದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶರಣ ಸೇನೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಾಡಿನಲ್ಲಿ ಮುಂದೆಯು ಶರಣ ಸಂಸ್ಕೃತಿ ಉಳಿಸಬೇಕಿದೆ. ಶರಣ ಸೇನೆ ಉದ್ಘಾಟನೆ ನನಗೆ ಸಂತೋಷ ತಂದಿದೆ. ಇದು ಚಿತ್ರದುರ್ಗಕ್ಕೆ ಸೀಮಿತವಾಗದೆ ರಾಜ್ಯಾದ್ಯಂತ ಪಸರಿಸಬೇಕು. ಸಮಾಜವನ್ನು ಸರಿಯಾದ ಹಾದಿಯಲ್ಲಿ ತೆಗೆದುಕೊಂಡು ಹೋಗಬೇಕಿದೆ. ಸಮ ಸಮಾಜದ ನಿರ್ಮಾಣದ ಗುರಿ ಶರಣ ಸೇನೆಯದು ಎಂದರು.
ಕಾಲು ಜಾರಿ ಆಗುವ ಅಪಾಯಕ್ಕಿಂತ ನಾಲಿಗೆ ಜಾರಿ ಆಗುವ ಅಪಾಯ ದೊಡ್ಡದ್ದು. ಈ ಎಚ್ಚರಿಕೆಯೊಂದಿಗೆ ಶರಣ ಸಂಘಟನೆ ಸಾಗಬೇಕಿದೆ. ದೇಶದ ಯುವ ಶಕ್ತಿಯೇ ಭರವಸೆಯ ಬೆಳಕು. ಸ್ವಾಮಿ ವಿವೇಕಾನಂದ, ಅಬ್ದುಲ್ ಕಲಾಂಜಿ, ನರೇಂದ್ರ ಮೋದೀಜಿ ಇವರು ಸಹ ಯುವಶಕ್ತಿಗೆ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶರಣ ಸೇನೆ ಪದಾಧಿಕಾರಿಗಳಿಗೆ ವಿಜಯೇಂದ್ರ ಅವರು ಪ್ರತಿಜ್ಞಾ ವಚನ ಬೋಧಿಸಿದರು.
ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತಿನಲ್ಲಿ ಶಾಶ್ವತವಾದುದು ವಿಚಾರ ಶಕ್ತಿ. ವಿಚಾರಗಳನ್ನು ಕೇಳಿಸಿಕೊಳ್ಳಲಾರದವರು ಸಮಾಜದಲ್ಲಿ ಶಕ್ತಿಯಾಗಲು ಸಾಧ್ಯವಿಲ್ಲ. ಸಾವಿರಾರು ಜನ ಬಂದಿರುವ ನಿಮಗೆ ಅಭಿನಂದನೆಗಳು. ವ್ಯಕ್ತಿ ಒಂದು ಶಕ್ತಿಯಾಗಬೇಕು. ಧಾರ್ಮಿಕ ಪೀಠಗಳಲ್ಲಿ ಧ್ಯಾನ ಮಾಡುವ ಹಾಗೆ ಯುವಶಕ್ತಿ ಕೇಳಿಸಿಕೊಳ್ಳಬೇಕು. ಮಾನವ ಜನಾಂಗವನ್ನು ವಿಚಾರ ಶಕ್ತಿ ಆಳುತ್ತದೆ. ಹಣ, ಅಧಿಕಾರ, ಆಸ್ತಿ ಬರುತ್ತವೆ ಮತ್ತು ಹೋಗುತ್ತವೆ. ಅದೇ ಸರ್ವಸ್ವ ಆಗಬಾರದು ಎಂದರು.
ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಶರಣ ಪದ ಜಾತಿ, ಮತ, ಧರ್ಮದ ಎಲ್ಲೆಯನ್ನು ಮೀರಿದ್ದು. ಅದು ವಿಶ್ವವ್ಯಾಪಿಯಾದುದು. ಶರಣ ಪದದೊಂದಿಗೆ ಸೇನೆ ಪದ ಸಂಘಟನಾತ್ಮಕವಾದುದು. ಶರಣ ಸೇನೆ ಧಾರ್ಮಿಕ ತಳಹದಿಯ ಮೇಲೆ ಉದ್ಘಾಟನೆಗೊಂಡಿದೆ. ರಚನಾತ್ಮಕವಾಗಿ ಕೆಲಸ ಮಾಡಬೇಕಿದೆ. ಇದು ವ್ಯಕ್ತಿ, ಜಾತಿ, ಸಂಘಟನೆ ವಿರುದ್ಧ ರಚನೆಯಾದುದಲ್ಲ. ಉದಾತ್ತ ಚಿಂತನೆಗಳನ್ನು ಇಟ್ಟುಕೊಂಡು ರಚನೆಯಾಗಿದೆ. ದೇಶದಲ್ಲಿ ಯುವಶಕ್ತಿಯ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಶಾಸಕ ತಿಪ್ಪಾರೆಡ್ಡಿ ಮಾತನಾಡಿ, ರೈತರಿಗೆ ಅನುಕೂಲವಾಗುವ ಚಿತ್ರದುರ್ಗ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿಗಳ ಆದೇಶವಾಗಿದೆ ಎಂದು ತಿಳಿಸಿದರು. ಶಾಸಕ ಟಿ.ರಘುಮೂರ್ತಿ, ಶರಣ ಸೇನೆ ಅಧ್ಯಕ್ಷ ಎ.ಎಂ.ಮರುಳಾರಾಧ್ಯ ಮಾತನಾಡಿದರು. ರಾಜ್ಯ ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss