ಹಾಕಿ ಆಟಗಾರರ ಅಮಾನತು: ಕಾನೂನು ಹೋರಾಟಕ್ಕೆ ನಿರ್ಧಾರ

ಹೊಸ ದಿಗಂತ ವರದಿ, ಮಡಿಕೇರಿ:

ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಇತ್ತೀಚೆಗೆ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾಹಬ್ಬದಲ್ಲಿ ಭಾಗವಹಿಸಿದ್ದ ಹಾಕಿ ಆಟಗಾರರನ್ನು ಅಮಾನತುಗೊಳಿಸಿರುವ ಹಾಕಿ ಕೂರ್ಗ್ ಸಂಸ್ಥೆಯ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಗೊಂಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ನೆರವಂಡ ಅನೂಪ್ ಉತ್ತಯ್ಯ ಅವರು, ಈ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು.
ಬಾಳುಗೋಡುವಿನಲ್ಲಿ ನ.17 ರಿಂದ 20 ರವರೆಗೆ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ನಡೆದ 8ನೇ ವರ್ಷದ ಕೊಡವ ನಮ್ಮೆಯ ಪ್ರಯುಕ್ತ ಆಯೋಜಿಸಲಾಗಿದ್ದ ಅಂತರ ಕೊಡವ ಸಮಾಜಗಳ ಹಾಕಿ ಪಂದ್ಯಾವಳಿಯಲ್ಲಿ ಮೂರ್ನಾಡು ಕೊಡವ ಸಮಾಜದ ಹತ್ತು ಆಟಗಾರರು ಸೇರಿದಂತೆ 15 ಮಂದಿಯನ್ನು ಮತ್ತು ಶ್ರೀಮಂಗಲ ತಂಡವನ್ನು ಯಾವುದೇ ಮಾಹಿತಿ ನೀಡದೆ ಹಾಕಿ ಕೂರ್ಗ್ ಸಂಸ್ಥೆ ಒಂದು ವರ್ಷ ಅಮಾನತು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಟಗಾರರಿಗೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ಅಮಾನತು ಮಾಡಿ ಪತ್ರಿಕೆಗಳಿಗೆ ಹೇಳಿಕೆ ನೀಡಿರುವುದು ಖಂಡನೀಯ. ಹಾಕಿ ಕೂರ್ಗ್ ಸಂಸ್ಥೆ ಆಸಕ್ತ ಕ್ರೀಡಾಪಟುಗಳ ಕ್ರೀಡಾ ಬೆಳವಣಿಗೆಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ವ್ಯತಿರಿಕ್ತವಾಗಿ ನಡೆದುಕೊಳ್ಳಬಾರದು. ತಮ್ಮ ಸ್ವಪ್ರತಿಷ್ಠೆ ಮತ್ತು ಸ್ವಾರ್ಥಕ್ಕಾಗಿ ಸಂಸ್ಥೆಯನ್ನು ಬಳಸಿಕೊಳ್ಳಬಾರದು ಎಂದು ತಿಳಿಸಿದ ಅನೂಪ್ ಉತ್ತಯ್ಯ, ತಿಳಿಯದೆ ಆದ ತಪ್ಪಿಗೆ ಲಿಖಿತ ರೂಪದಲ್ಲಿ ತಾವು ಕ್ಷಮೆ ಕೋರಿದ್ದರೂ ಅಮಾನತುಗೊಳಿಸುವಂತಹ ಕಠಿಣ ಕ್ರಮ ಕೈಗೊಂಡಿರುವುದು ಯಾವ ಸಾಧನೆಗಾಗಿ ಎಂದು ಪ್ರಶ್ನಿಸಿದರು.
ಬಾಳುಗೋಡು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಹಾಕಿ ಕೂರ್ಗ್ ಸಂಸ್ಥೆಯಿಂದ ಅನುಮತಿ ಪಡೆದಿಲ್ಲ ಎನ್ನುವ ಸಣ್ಣ ಕಾರಣಕ್ಕಾಗಿ ಅಮಾನತು ಕ್ರಮ ಕೈಗೊಳ್ಳುವ ಮೂಲಕ ಅಮಾಯಕ ಆಟಗಾರರಿಗೆ ಅನ್ಯಾಯ ಮಾಡಲಾಗಿದೆ. ಕ್ರೀಡೆ ಎಂಬುದು ಬಾಂಧವ್ಯವನ್ನು ಬೆಸೆಯಲು ಇರುವ ಕ್ಷೇತ್ರವೇ ಹೊರತು ಸ್ವಾರ್ಥ ಸಾಧನೆಗಾಗಿ ಅಲ್ಲ. ಹಾಕಿ ಕೂರ್ಗ್ ಎಂಬ ಸಂಸ್ಥೆ ಕೊಡಗಿನ ಎಲ್ಲಾ ಹಾಕಿ ಆಟಗಾರರನ್ನು ತನ್ನ ಅಧೀನದಲ್ಲಿ ನೋಂದಾಯಿಸಿಕೊಂಡು ಇಲ್ಲದ ನೀತಿ ನಿಯಮಗಳನ್ನು ಆಟಗಾರರ ಮೇಲೆ ಹೇರಿ ಕ್ರೀಡಾ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳು ಎಚ್ಚೆತ್ತುಕೊಂಡು ಸಂಸ್ಥೆಯ ಹಿಡಿತದಿಂದ ಹೊರ ಬರುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.
ಆಟಗಾರರ ಭವಿಷ್ಯದ ದೃಷ್ಟಿಯಿಂದ ಅಮಾನತುಗೊಂಡವರ ಪರವಾಗಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಅಮಾನತಿಗೆ ತಡೆಯಾಜ್ಞೆ ದೊರೆತಿದೆ ಎಂದರು.
ಹಿಂದಿನಿಂದಲೂ ಹಿರಿಯರು ಎಲ್ಲಾ ಬಾಲಕ, ಬಾಲಕಿಯರನ್ನು ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಅಲ್ಲದೆ ಅಗತ್ಯ ಸಹಕಾರ ನೀಡಿದ್ದಾರೆ. ಹಾಕಿ ಆಟಗಾರರ ಕ್ರೀಡಾ ಬೆಳವಣಿಗೆಗಾಗಿ ಹಾಕಿ ಕೂರ್ಗ್ ಸಂಸ್ಥೆ ರಚನೆಗೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಟಗಾರರ ಭವಿಷ್ಯ ಹಾಳುಮಾಡುವ ಕಾರ್ಯ ನಡೆಯುತ್ತಿದೆ ಎನ್ನುವ ಸಂಶಯ ಮೂಡುತ್ತಿದೆ ಎಂದು ಅನೂಪ್ ಉತ್ತಯ್ಯ ಆರೋಪಿಸಿದರು.
ಹಾಕಿಪಟು ಚೌರೀರ ನಿರನ್ ಮಂದಣ್ಣ ಮಾತನಾಡಿ ಹಾಕಿ ಕೂರ್ಗ್ ಸಂಸ್ಥೆ ಜಾರಿಗೆ ತಂದಿರುವ ನಿಯಮಗಳನ್ನು ಆಟಗಾರರಿಗೆ ಮನವರಿಕೆ ಮಾಡಿಕೊಟ್ಟಿದೆಯೇ, ಜಿಲ್ಲೆಯ ಹಾಕಿ ಪಟುಗಳ ಬೆಳವಣಿಗೆಗೆ ಈ ಸಂಸ್ಥೆ ಏನು ಕೊಡುಗೆ ನೀಡಿದೆ ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಮೂರ್ನಾಡು ಕೊಡವ ಸಮಾಜದ ಕಾರ್ಯದರ್ಶಿ ಕಂಬೀರಂಡ ಗೌತಮ್, ಸದಸ್ಯ ಚೌರೀರ ಸೋಮಣ್ಣ ಹಾಗೂ ಚೌರೀರ ಶ್ಯಾಂ ಗಣಪತಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!