ಸಂಶಯ ಹುಟ್ಟುಹಾಕಿದ ಪ್ರಿನ್ಸೆಸ್: ಸಮುದ್ರ ಮಧ್ಯೆ ಸಂಚರಿಸಬೇಕಿದ್ದ ಚೀನಾ ನೌಕೆ ಮಂಗಳೂರಿಗೆ ಬಂದಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ಹೊರವಲಯ ಉಳ್ಳಾಲ ಬಳಿ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗುತ್ತಿರುವ ಚೀನಾ ಮೂಲದ ಪ್ರಿನ್ಸೆಸ್ ಮಿರಾಲ್ ಹಡಗು, ಕಡಲಿನ ಒಡಲಿಗೆ ಇಳಿಯುವ ಮುನ್ನ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಅಸಲಿಗೆ ಸಮುದ್ರ ಮಧ್ಯೆ ಸಂಚರಿಸಬೇಕಿದ್ದ ಈ ಹಡಗು ಮಂಗಳೂರಿಗೆ ಆಗಮಿಸಿರುವುದು ಯಾಕೆ ಎಂಬ ಅನುಮಾನ ಕಾಡುತ್ತಿದ್ದು, ಈ ಬಗ್ಗೆ ಕೇಂದ್ರ ತನಿಖಾ ತಂಡ ತನಿಖೆ ನಡೆಸುವ ಸಾಧ್ಯತೆ ದಟ್ಟವಾಗುತ್ತಿದೆ.
ಸರಕು ಹೇರಿಕೊಂಡಿರುವ ಈ ಹಡಗು ಟಿಯಾಂಜಿನ್‌ನಿಂದ ಲೆಬೆನಾನ್‌ಗೆ ತೆರಳುತ್ತಿತ್ತು. ಸಮುದ್ರ ಮಧ್ಯ ಸಂಚರಿಸುವ ಬದಲು ಉಳ್ಳಾಲ ಸಮುದ್ರ ತೀರಕ್ಕೆ ಆಗಮಿಸಿ ಅಪಾಯಕ್ಕೀಡಾಗಿತ್ತು. ಸದ್ಯಕ್ಕೆ ಈ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಸರಕು ನೌಕೆ ಪ್ರಿನ್ಸೆಸ್ ಮಿರಾಲ್ ಸಮುದ್ರ ತೀರದಲ್ಲಿ ಮುಳುಗಿರುವುದರಿಂದ ಅದರಲ್ಲಿರುವ 220 ಮೆಟ್ರಿಕ್ ಟನ್ ತೈಲ ಸೋರಿಕೆ ಭೀತಿ ಆವರಿಸಿದೆ. ಹಡಗಿನಿಂದ ರಕ್ಷಿಸಲ್ಪಟ್ಟಿರುವ 15 ಮಂದಿ ಸಿರಿಯನ್ ಪ್ರಜೆಗಳನ್ನು ನವಮಂಗಳೂರು ಬಂದರು ಗೆಸ್ಟ್‌ಹೌಸ್‌ನಲ್ಲಿ ಇರಿಸಲಾಗಿದೆ. ಸಧ್ಯ ಬೆಂಗಳೂರಿನ ವಿದೇಶೀಯರ ಆಸರೆ ಕೇಂದ್ರ ಭರ್ತಿಯಾದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಬಳಿಯ ಇನ್ನೊಂದು ಕೇಂದ್ರಕ್ಕೆ ಇವರೆಲ್ಲರನ್ನು ಸ್ಥಳಾಂತರಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!