ದಾಸೋಹ ದಿನದ ಅರ್ಥಪೂರ್ಣ ಆಚರಣೆಗೆ ಅರಮೇರಿ ಕಳಂಚೇರಿ ಮಠದ ಸ್ವಾಮೀಜಿಗಳ ಕರೆ

ಹೊಸದಿಗಂತ ವರದಿ, ಸೋಮವಾರಪೇಟೆ:

ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ,‌ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾಗಿರುವ ಜ.21 ನ್ನು ದಾಸೋಹ ದಿನವನ್ನಾಗಿ ಆಚರಿಸುವಂತೆ ಸರಕಾರ ಆದೇಶಿಸಿದ್ದು, ಅದರಂತೆ ಆ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಕರೆ ನೀಡಿದರು.
ಶಿವಕುಮಾರ ಜಯಂತ್ಯೋತ್ಸವ ಸಮಿತಿ ವತಿಯಿಂದ ಪಟ್ಟಣದ ಆನೆಕೆರೆ ಸಮೀಪ ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ನಿರ್ಮಿಸುತ್ತಿರುವ ಪ್ರಯಾಣಿಕರ ತಂಗುದಾಣ ಕಾಮಗಾರಿ ವೀಕ್ಷಿಸಿ ಮಾಧ್ಯಮದೊಂದಿಗೆ ಅವರುಗಳು ಮಾತನಾಡಿದರು.
ಸಿದ್ದಗಂಗಾ ಶ್ರೀಗಳು ಅಕ್ಷರ, ಅನ್ನ, ಆಶ್ರಯಕ್ಕೆ ಮಹತ್ವ ಕೊಟ್ಟ ಮಹಾನ್ ವ್ಯಕ್ತಿ. ಅಂತಹವರ ಹೆಸರಿನಲ್ಲಿ ದಾಸೋಹದಿನವನ್ನಾಗಿ ಆಚರಿಸುವುದು ನಾಡಿನ ಜನತೆ ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದರು. ಈ ಬಾರಿಯೂ ಕೊರೋನಾದಿಂದಾಗಿ ಜನರಲ್ಲಿ ಆತಂಕ ಮೂಡಿದೆ. ಆದ್ದರಿಂದ ನಮ್ಮ ನಮ್ಮ ಗ್ರಾಮಗಳಲ್ಲಿ, ಮನೆಗಳಲ್ಲಿ ಶ್ರೀಗಳ ಫೋಟೋ ಇರಿಸಿ ಪೂಜೆ ಸಲ್ಲಿಸುವ ಮೂಲಕ ಅವರ ಸ್ಮರಣೆ ಮಾಡೋಣ. ಆದರೆ ಕೊರೋನಾ ಬಗ್ಗೆ ಜಾಗ್ರತೆ ವಹಿಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ತಿಳಿಸಿದರು.
ಸೋಮವಾರಪೇಟೆ ಪಟ್ಟಣದಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರ ನೆರವಿನಿಂದ ಸ್ವಾಮೀಜಿ ಹೆಸರಿನಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸುತ್ತಿರುವುದು ಶ್ಲಾಘನೀಯ. ಆ ಮೂಲಕ ಪ್ರಯಾಣಿಕರಿಗೆ ಒಂದಷ್ಟು ಹೊತ್ತು ಸ್ವಾಮೀಜಿ ಹೆಸರಿನ ಸೂರಿನಡಿಯಲ್ಲಿ ಆಶ್ರಯ ಪಡೆಯುವ ಅವಕಾಶ ಸಿಕ್ಕಂತಾಗುತದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!