ಅನಾಹುತ ಸಂಭವಿಸುವ ಮೊದಲು ಅನಧಿಕೃತ ಹೋಂಸ್ಟೇಗಳ ವಿರುದ್ಧ ಕ್ರಮಕೈಗೊಳ್ಳಿ: ಕೊರವೇ ಒತ್ತಾಯ

ಹೊಸದಿಗಂತ ವರದಿ ಮಡಿಕೇರಿ:

ಭಾರೀ ಅನಾಹುತ ಸಂಭವಿಸುವ ಮೊದಲು ಕೊಡಗು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜಿಲ್ಲೆಯಲ್ಲಿರುವ ಎಲ್ಲಾ ಅನಧಿಕೃತ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೊಡಗು ರಕ್ಷಣಾ ವೇದಿಕೆ ಒತ್ತಾಯಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೊರವೇ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ, ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಸಮೀಪದ ನೆಮ್ಮಲೆ ಗ್ರಾಮದ ಹೋಂಸ್ಟೇಯಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್ ಹಾಗೂ ಆತನ ಸಹಚರರು ತಂಗಿದ್ದರು ಎನ್ನುವ ಮಾಹಿತಿ ಆತಂಕವನ್ನು ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.

ಸಮಾಜಘಾತುಕ ಶಕ್ತಿಗಳು ಅನಧಿಕೃತ ಹೋಂಸ್ಟೇಗಳಲ್ಲಿ ಆಶ್ರಯ ಪಡೆದು ದೇಶದ್ರೋಹಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದ್ದು, ಈ ಬಗ್ಗೆ ಗುಪ್ತಚರ ಇಲಾಖೆ ಮತ್ತು ಜಿಲ್ಲಾಡಳಿತ ಗಂಭೀರ ಚಿಂತನೆ ಹರಿಸುವ ಅಗತ್ಯವಿದೆ. ಜಿಲ್ಲೆಯ ಗ್ರಾಮೀಣ ಭಾಗದ ಒಳ ಪ್ರದೇಶಗಳಲ್ಲಿ ಅನಧಿಕೃತ ಹೋಂಸ್ಟೇಗಳು ಸದ್ದುಗದ್ದಲವಿಲ್ಲದೆ ಕಾರ್ಯಾಚರಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಇಲ್ಲಿಗೆ ಯಾರು ಬಂದು ಹೋಗುತ್ತಾರೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲದಾಗಿದೆ.

ಜಿಲ್ಲೆಯ ಸುರಕ್ಷತೆಯ ದೃಷ್ಟಿಯಿಂದ ಕೊಡಗು ರಕ್ಷಣಾ ವೇದಿಕೆ ಬಹಳ ಹಿಂದಿನಿಂದಲೂ ಅನಧಿಕೃತ ಹೋಂಸ್ಟೇಗಳ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿದೆ. ಅಧಿಕಾರಿಗಳು ತಪಾಸಣೆಯ ನೆಪದಲ್ಲಿ ನಗರ ಮತ್ತು ಪಟ್ಟಣದ ಹೋಂಸ್ಟೇಗಳಿಗೆ ಮಾತ್ರ ಭೇಟಿ ನೀಡುತ್ತಿರುವುದು ಕಂಡು ಬಂದಿದೆ. ಆದರೆ ಗ್ರಾಮೀಣ ಭಾಗದಲ್ಲಿರುವ ಹೋಂಸ್ಟೇಗಳ ಚಟುವಟಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಿಯಮ ಬಾಹಿರ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ. ಹೋಂಸ್ಟೇ ನಡೆಸುತ್ತೇವೆ ಎಂದು ಬರುವ ವ್ಯಕ್ತಿಗಳ ಬಗ್ಗೆ ಮಾಲಕರುಗಳು ಕೂಡಾ ಎಚ್ಚರ ವಹಿಸುವ ಅಗತ್ಯವಿದೆ. ಯಾವುದೇ ಆಧಾರವಿಲ್ಲದೆ ಬರುವ ವ್ಯಕ್ತಿಗಳಿಗೆ ಕಟ್ಟಡ ಮತ್ತು ಜಾಗವನ್ನು ಬಾಡಿಗೆಗೆ ನೀಡುವ ಮೊದಲು ಮಾಲಕರುಗಳು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.
ತಕ್ಷಣ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಪೊಲೀಸರ ಸಹಕಾರ ಪಡೆದು ಅನಧಿಕೃತ ಹೋಂಸ್ಟೇಗಳಿಗೆ ಬೀಗ ಜಡಿಯಬೇಕೆಂದು ಅವರು ಒತ್ತಾಯಿಸಿದ್ದಾರೆ.

ಮೂಲ ಮಾಲಕರೇ ಹೊಣೆ:

ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಕೊಡಗಿಗೆ ಬಂದು ಹೋಗಿರುವ ಕುರಿತು ಎನ್‌ಐಎ ತಂಡ ತನಿಖೆ ನಡೆಸಿದೆ. ಹೋಂಸ್ಟೇಗಳಿಗೆ ತನ್ನದೇ ಆದ ನಿಯಮಗಳಿದ್ದು ಅದರಂತೆಯೇ ಕಾರ್ಯ ನಿರ್ವಹಿಸಬೇಕು. ಹೋಂಸ್ಟೇಗೆ ಬರುವ ವ್ಯಕ್ತಿಗಳು ಸಂಶಯಾಸ್ಪದವಾಗಿ ಕಂಡುಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ. ಹೋಂಸ್ಟೇಗಳನ್ನು ಬಾಡಿಗೆ ನೀಡಿದ್ದರೆ ಅಲ್ಲಿ ನಡೆಯುವ ಯಾವುದೇ ಪ್ರಕರಣಗಳಿಗೆ ಮೂಲ ಮಾಲಕರೇ ಹೊಣೆಯಾಗುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ ಸ್ಪಷ್ಟಪಡಿಸಿದ್ದಾರೆ.

ಅಳಿವು-ಉಳಿವಿನ ಪ್ರಶ್ನೆ: ಜಿಲ್ಲಿಯಲ್ಲಿ ಕೆಲವು ಹೋಂಸ್ಟೇಗಳು ನಿಯಮಗಳನ್ನು ಗಾಳಿಗೆ ತೂರಿ ಕಾರ್ಯ ನಿರ್ವಹಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇದು ನಮ್ಮ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು, ಕೊಡಗು ಅಪರಾಧಿಗಳಿಗೆ ಆಶ್ರಯ ತಾಣವಾಗದಂತೆ ಎಚ್ಚವಹಿಸಲು ಸೂಚಿಸಲಾಗಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!