ಹೊಸ ದಿಗಂತ ವರದಿ, ಕೊಡಗು:
ಸಾರಿಗೆ ಸಂಸ್ಥೆ ಸಿಬ್ಬಂದಿಗಳು ನಡೆಸುತ್ತಿರುವ ಮುಷ್ಕರಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವ ವಹಿಸಿ ಬೆಂಬಲ ಸೂಚಿಸಿರುವುದು ಸರಿಯಲ್ಲ. ಅವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ಮುಖಂಡ ಕೋಡಿಹಳ್ಳಿ
ಚಂದ್ರಶೇಖರ್ ಕೆಎಸ್ಆರ್ ಟಿಸಿ ಮುಷ್ಕರದ ನೇತೃತ್ವ ವಹಿಸಲು ಹೇಗೆ ಸಾಧ್ಯ ಎಂದು
ಪ್ರಶ್ನಿಸಿದರು.
ಸಾರಿಗೆ ಯೂನಿಯನ್ನಲ್ಲಿರುವವರೇ ಹೋರಾಟದ ನೇತೃತ್ವ ವಹಿಸಬೇಕು ಎಂಬ ಕಾನೂನಿದೆ. ಆದರೆ ಮುಷ್ಕರದಲ್ಲಿ ಭಾಗಿಯಾಗಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರ ಒಳಗುಟ್ಟು ಏನಿದೆ ಎಂದು ಗೊತ್ತಿಲ್ಲ. ಅವರ ವಿರುದ್ದ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳಬೇಕು ಎಂದು ಒತ್ತಾಯಿಸಿದರು.
ಕೋವಿಡ್ ಸನ್ನಿವೇಶದಲ್ಲಿ ಸಾರಿಗೆ ನೌಕರರ ವೇತನ ಹೆಚ್ಚಳ ಮತ್ತು ಅವರ ಬೇಡಿಕೆಗಳನ್ನು ಈಡೇರಿಸಲು ಅಸಾಧ್ಯವಾಗಿದೆ.ಈಗಾಗಲೇ ಕೋವಿಡ್ನಿಂದ ಸಾರಿಗೆ ಇಲಾಖೆಗೆ ಒಂದು ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಸಂಭವಿಸಿದೆ. ಸಾರಿಗೆ ಇಲಾಖೆ ನಷ್ಟದಲ್ಲಿರುವಾಗ ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ಹೂಡುವುದನ್ನು ಬಿಟ್ಟು ಅವರೆಲ್ಲ ಕೆಲಸಕ್ಕೆ ಹಾಜರಾಗಬೇಕು ಎಂದು ಮನವಿ ಮಾಡಿದರು.
ಸಾರಿಗೆ ಇಲಾಖೆಯಆರ್ಥಿಕ ಪರಿಸ್ಥಿತಿ ಉತ್ತಮವಾದ ಬಳಿಕ ವೇತನ ಹೆಚ್ಚಕ್ಕೆ ನಡೆಸುವ ಮುಷ್ಕರಕ್ಕೆ ಸಾರ್ವಜನಿಕರೇ బింబల ನೀಡುತ್ತಾರೆ. ಮಾತ್ರವಲ್ಲದೆ ಅವರ ಬೇಡಿಕೆಗೆ ಸ್ವತಃ ತಾನೇ ಬೆಂಬಲ ವ್ಯಕ್ತಪಡಿಸುತ್ತೇನೆ ಎಂದು ಅಪ್ಪಚ್ಚು ರಂಜನ್ ಭರವಸೆ ನೀಡಿದರು. ಎಲ್ಲಾ ಕೆಎಸ್ಆರ್ ಟಿಸಿ ನೌಕರರು ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಅಪ್ಪಚ್ಚು ರಂಜನ್ ಇದೇ ಸಂದರ್ಭ ಮನವಿ
ಮಾಡಿದರು.