ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಸದ್ಯಕ್ಕೆ ರಚನೆಯಾಗುವ ಲಕ್ಷಣ ಕಾಣುತ್ತಿಲ್ಲ. ಇದೀಗ ಮತ್ತೆ ಹೊಸ ಸರ್ಕಾರ ರಚನೆ ಪ್ರಕ್ರಿಯೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಶನಿವಾರ ಹೇಳಿದ್ದಾರೆ.
ಸರ್ಕಾರಕ್ಕೆ ವಿಶಾಲ ಚಿಂತನೆ ಮತ್ತು ಅಂತಾರಾಷ್ಟ್ರೀಯ ಸಮುದಾಯ ಒಪ್ಪುವಂತಹ ರೂಪ ನೀಡುವಲ್ಲಿ ತಾಲಿಬಾನ್ ಶ್ರಮಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ತಾಲಿಬಾನ್ ಉಗ್ರರು ಇಂದು ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯನ್ನು ಘೋಷಿಸುವ ನಿರೀಕ್ಷೆ ಇತ್ತು, ಸಂಘಟನೆಯ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದರ್ ಸರ್ಕಾರದ ನೇತೃತ್ವ ವಹಿಸುವ ಸಾಧ್ಯತೆ ಇತ್ತು. ಇದೀಗ ಹೊಸ ಸರ್ಕಾರ ರಚನೆ ಘೋಷಣೆಯನ್ನು ಎರಡನೇ ಬಾರಿಗೆ ಮುಂದೂಡಿದ್ದಾರೆ.
‘ಹೊಸ ಸರ್ಕಾರ ಮತ್ತು ಕ್ಯಾಬಿನೆಟ್ ಸದಸ್ಯರ ಕುರಿತು ಘೋಷಣೆಯನ್ನು ಮುಂದಿನ ವಾರ ಮಾಡಲಾಗುವುದು’ಎಂದು ಹೆಚ್ಚಿನ ವಿವರಗಳನ್ನು ನೀಡದೆ ಮುಜಾಹಿದ್ ಹೇಳಿದರು.
ಕಾಬೂಲ್ನಲ್ಲಿ ವಿಶಾಲ ಚಿಂತನೆ ಮತ್ತು ವಿಶ್ವಕ್ಕೆ ಸ್ವೀಕಾರಾರ್ಹವಾಗುವಂತಹ ಸರ್ಕಾರ ರಚನೆಯ ಕಸರತ್ತು ನಡೆಯುತ್ತಿರುವುದರಿಂದ ಸರ್ಕಾರ ರಚನೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ತಾಲಿಬಾನ್ ರಚಿಸಿರುವ ಸಮಿತಿಯ ಸದಸ್ಯ ಖಲೀಲ್ ಹಕ್ಕಾನಿ ಹೇಳಿದ್ದಾರೆ.
‘ತಾಲಿಬಾನ್ಗಳು ತಮ್ಮದೇ ಆದ ಸರ್ಕಾರವನ್ನು ರಚಿಸಬಹುದು. ಆದರೆ, ನಾವು ಸಮಾಜದ ಎಲ್ಲ ಜನರು, ಗುಂಪುಗಳು ಮತ್ತು ವಿಭಾಗಗಳ ಪ್ರಾತಿನಿಧ್ಯವನ್ನು ಹೊಂದಿರುವ ಆಡಳಿತವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು. ‘ತಾಲಿಬಾನ್ ಅನ್ನು ಅದರ ವಿಧಾನದಲ್ಲೇ ಜಗತ್ತು ಸ್ವೀಕರಿಸುವುದಿಲ್ಲ’ ಎಂದು ಅವರ ಸ್ಪಷ್ಟಪಡಿಸಿದರು.
ಅಫ್ಘಾನಿಸ್ತಾನದ ಮಾಜಿ ಪ್ರಧಾನಿ ಮತ್ತು ಜಮಿಯತ್ ಇ ಇಸ್ಲಾಮಿ ಅಫ್ಘಾನಿಸ್ತಾನದ ಮುಖ್ಯಸ್ಥ ಗುಲ್ಬುದ್ದೀನ್ ಹೆಕ್ಮತ್ಯಾರ್ ಮತ್ತು ಆಫ್ಗಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿಯ ಸಹೋದರ ಸಹ ತಾಲಿಬಾನ್ಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ತಾಲಿಬಾನ್ ಸರ್ಕಾರದಲ್ಲಿ ಅವರಿಗೆ ಪ್ರಾತಿನಿಧ್ಯ ಸಿಗಲಿದೆ ಎಂದು ಅವರು ಹೇಳಿದರು.