ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ, ಭಾರತೀಯ ಛಾಯಾಗ್ರಾಹಕ ದ್ಯಾನಿಶ್ ಸಿದ್ದಿಕಿ ಹತ್ಯೆಗೆ ತಾನು ಕಾರಣ ಅಲ್ಲ ಎಂದು ತಾಲಿಬಾನ್ ಹೇಳಿಕೊಂಡಿದೆ.
ಸಿದ್ದಿಕಿ ಸಾವಿಗೆ ವಿಷಾದ ವ್ಯಕ್ತಪಡಿಸಿರುವ ಭಯೋತ್ಪಾದಕ ಸಂಘಟನೆಯ ವಕ್ತಾರ ಜಬಿಯುಲ್ಲಾ ಮುಜಾಹಿದ್, ಸಿದ್ಕಿಕಿ ಮೇಲೆ ಯಾರು ಗುಂಡು ಹಾರಿಸಿದರು ಎಂದು ಗೊತ್ತಿಲ್ಲ. ಆತ ಹೇಗೆ ಮೃತಪಟ್ಟ ಎನ್ನುವುದೇ ತಿಳಿದಿಲ್ಲ ಎಂದು ಅಂತರಾಷ್ಟ್ರೀಯ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಯುದ್ದ ನಡೆಯುತ್ತಿರುವ ಪ್ರದೇಶದಲ್ಲಿ ಓರ್ವ ಪತ್ರಕರ್ತ ಬಂದರೆ ಆ ಬಗ್ಗೆ ನಮಗೆ ಮಾಹಿತಿ ನೀಡಬೇಕು. ಆಗ ಮಾತ್ರ ಆ ವ್ಯಕ್ತಿಗೆ ಯಾವುದೇ ರೀತಿಯ ಅಡಚಣೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ನಮಗೆ ತಿಳಿಸದೆಯೇ ಯುದ್ಧ ವಲಯ ಪ್ರವೇಶಿಸಿ ಅಪಾಯಕ್ಕೆ ಸಿಲುಕುತ್ತಿರುವ ಪತ್ರಕರ್ತರ ಬಗ್ಗೆ ನಮಗೆ ಕಳವಳವಿದೆ ಎಂದು ಪರೋಕ್ಷವಾಗಿ ಎಚ್ಚರಿಕೆಯನ್ನು ಕೂಡ ತಾಲಿಬಾನ್ ರವಾನಿಸಿದೆ.
ರಾಯ್ ಟರ್ಸ್ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಫೋಟೋ ಜರ್ನಲಿಸ್ಟ್ ದ್ಯಾನಿಶ್ ಸಿದ್ದಿಕಿ,, ಕಂದಹಾರ್ ನ ಸ್ಟಿನ್ ಬೋಲ್ಡಕ್ ಪ್ರದೇಶದಲ್ಲಿ ಅಫ್ಘಾನ್ ಸೇನೆ ಮತ್ತು ತಾಲಿಬಾನ್ ನಡುವೆ ನಡೆಯುತ್ತಿದ್ದ ಯುದ್ಧದ ಬಗ್ಗೆ ವರದಿ ಮಾಡಲು ತೆರಳಿದ್ದರು. ಕವರೇಜ್ ಮಾಡುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.