ಗಾಂಧಿಜಯಂತಿಯಂದು ರಾಜ್ಯದಾದ್ಯಂತ ಆರೆಸ್ಸೆಸ್‌ ರ್ಯಾಲಿ ನಿಷೇಧಿಸಿದ ತಮಿಳುನಾಡು ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ತಮಿಳುನಾಡಿನಾದ್ಯಂತ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ರ್ಯಾಲಿಗಳನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ. ಕೆಲವು ನಿರ್ಬಂಧಗಳೊಂದಿಗೆ ಆರ್‌ಎಸ್‌ಎಸ್ ರ್ಯಾಲಿಗಳಿಗೆ ಅನುಮತಿ ನೀಡುವಂತೆ ಮದ್ರಾಸ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ನಂತರವೂ ಸರ್ಕಾರವು ಅನುಮತಿ ನಿರಾಕರಿಸಿದೆ ಎಂದು ಮೂಲಗಳು ವರದಿ ಮಾಡಿವೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಅನ್ನು ಕೇಂದ್ರವು ನಿಷೇಧಿಸಿರುವಿದರಿಂದ ಮುಸ್ಲಿಂ ಸಂಘಟನೆಗಳು ಹಲವಾರು ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಮೆರವಣಿಗೆಗಳು ಅಥವಾ ಸಭೆಗಳನ್ನು ನಡೆಸಲು ಆರ್‌ಎಸ್‌ಎಸ್ ಅಥವಾ ಯಾವುದೇ ಸಂಸ್ಥೆಗೆ ಯಾವುದೇ ಅನುಮತಿಯನ್ನು ನೀಡಲಾಗುವುದಿಲ್ಲ ಎಂದು ತಮಿಳುನಾಡು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದಕ್ಕೂ ಮುನ್ನ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ನಾಮ್ ತಮಿಝರ್ ಕಚ್ಚಿ ಅಕ್ಟೋಬರ್ 2 ರಂದು ಆರ್‌ಎಸ್‌ಎಸ್ ವಿರುದ್ಧ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ್ದವು.

ತಮಿಳುನಾಡು ಮೂಲದ ಸಾಮಾಜಿಕ ಮತ್ತು ರಾಜಕೀಯ ಆಂದೋಲನವಾದ ಮೇ 17 ರ ಆಂದೋಲನದ ಸಂಘಟಕ ತಿರುಮುರುಗನ್ ಗಾಂಧಿ ಕೂಡ, “ಹೈಕೋರ್ಟ್ ಆರ್‌ಎಸ್‌ಎಸ್‌ಗೆ ಅನುಮತಿ ನೀಡಿರುವುದು ದುರದೃಷ್ಟಕರ. ಆರ್‌ಎಸ್‌ಎಸ್ ಅನ್ನು ಎರಡು ಬಾರಿ ನಿಷೇಧಿಸಲಾಗಿದೆ ಮತ್ತು ಅವರು ನಮ್ಮ ರಾಷ್ಟ್ರಪಿತನ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ. ಅದು ವಿಭಜಕ ಮತ್ತು ಫ್ಯಾಸಿಸ್ಟ್ ಭಯೋತ್ಪಾದಕ ಸಂಘಟನೆಯಾಗಿದೆ.” ಎಂದು ಆರೋಪಿಸಿದ್ದಾರೆ.

ಈ ನಡುವೆ ರಾಜ್ಯ ಸರ್ಕಾರದ ನಿರ್ಧಾರವು ನ್ಯಾಯಾಂಗ ನಿಂದನೆ ಎಂದು ಆರೋಪಿಸಿ ಆರ್‌ಎಸ್‌ಎಸ್ ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗಿದೆ. ನಾಳೆ ಪ್ರಕರಣದ ವಿಚಾರಣೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!