ಹೊಸದಿಗಂತ ವರದಿ, ಮಂಡ್ಯ:
ಕಾವೇರಿ ಜಲಾನಯನ ಪ್ರದೇಶದ ಹೆಚ್ಚುವರಿ ನೀರನ್ನು ಉಪಯೋಗಿಸಿಕೊಂಡು ಕೃಷಿ ಪ್ರದೇಶವನ್ನು ವಿಸ್ತರಿಸುವುದರ ಜೊತೆಗೆ ಜಲಾನ ವ್ಯಾಪ್ತಿಯ ಹೊರತಾಗಿ ಕಾಮಗಾರಿ ಕೈಗೊಳ್ಳಲು ತಮಿಳುನಾಡು ಸರ್ಕಾರ ಯೋಜನೆ ರೂಪಿಸಿದ್ದರೂ ಕರ್ನಾಟಕ ಯಾವುದೇ ಕಾನೂನು ಹೋರಾಟ ನಡೆಸದೆ ಮೌನವಾಗಿದೆ ಎಂದು ಜಲತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್ ಕಿಡಿಕಾರಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿರುವ ತಮಿಳುನಾಡು ಸರ್ಕಾರ, ಕೇಂದ್ರ ಸರ್ಕಾರದ 6.291 ಕೋಟಿ ಆರ್ಥಿಕ ನೆರವಿನಿಂದ ವೆಲ್ಲಾರು, ವೈಗೈ ಮತ್ತು ಗುಂಡಾರು ನದಿಗಳನ್ನು ಜೋಡಣೆ ಮಾಡಲು ಮುಂದಾಗಿದೆ. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಹೆಚ್ಚುವರಿ ನೀರಿನ ಕಾರಣಕ್ಕಾಗಿಯೇ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಅಡ್ಡಿಪಡಿಸಿತ್ತಿದೆ. ಹೆಚ್ಚುವರಿಯಾಗಿ ಹೋಗುವ 80 ಟಿಎಂಸಿ ನೀರನ್ನು ವೆಲ್ಲಾರು, ವೈಗೈ ಹಾಗೂ ಗುಂಡಾರು ನದಿಗಳಿಗೆ ಹಂಚಿಕೆ ಮಾಡಿ ನದಿಗಳ ಜೋಡಣೆಗೆ ಮುಂದಾಗಿದೆ ಎಂದು ತಿಳಿಸಿದರು.
ಮೊದಲ ಹಂತವಾಗಿ ತಿರುಚ್ಚಿ, ಪುದುಕೋಟೆ, ಶಿವಗಂಗೈ ಹಾಗೂ ವಿರುದನಗರದ ಜನತೆಗೆ ಕುಡಿಯುವ ನೀರು, 118.45 ಕಿ.ಮೀ. ಉದ್ದದ ಬೃಹತ್ ಕಾಲುವೆ ಗುಂಡಾರು ನದಿಗೆ ಜೋಡಿಸುವುದು, 342 ಕೆರೆ ಭರ್ತಿ, ಅಂತರ್ಜಲವೃದ್ಧಿ ಮತ್ತು 42,170 ಎಕರೆ ನೀರಾವರಿ. ಎರಡನೇ ಹಂತದಲ್ಲಿ ವೆಲ್ಲಾರು ನದಿಯಿಂದ ವೈಗೈ ನದಿವರೆಗೆ 109 ಕಿ.ಮೀ ಕಾಲುವೆ. ಪುದುಕೋಟೆ, ಶಿವಗಂಗೈ ಮತ್ತು ರಾಮನಾಥ ಪುರಂ ಜಿಲ್ಲೆಗಳಿಗೆ 220 ಕೆರೆ ಭರ್ತಿ, 23,245 ಎಕರೆ ನೀರಾವರಿ.
3ನೇ ಹಂತದಲ್ಲಿ ವೈಗೈ ನದಿಯಿಂದ ಗುಂಡಾರು ನದಿಗೆ 34 ಕಿ.ಮೀ. ಕಾಲುವೆ. ವಿರುಧನಗರ ಮತ್ತು ರಾಮನಾಥಪುರಂ ಜಿಲ್ಲೆಗಳಿಗೆ 492 ಕೆರೆಗಳ ಭರ್ತಿ 44,547 ಎಕರೆ ನೀರಾವರಿ. ಒಟ್ಟು 1054 ಕೆರೆಗಳು, 1,09,962 ಎಕರೆ ಜಮೀನಿಗೆ ನೀರು ಹಾಗೂ 261.45 ಕಿ.ಮೀ. ಕಾಲುವೆಗಳಿಗೆ ನೀರುಣಿಸುವ ಯೋಜನೆಯನ್ನು ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿದೆ ವಿವರಿಸಿದರು.