ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ್‌ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಹೊಸ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಚಾಲನೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನಿ ಮೋದಿಗೆ ಬಂಜಾರಾ ಸಮುದಾಯದ ಸಾಂಪ್ರದಾಯಿಕ ಶಾಲು ಹಾಕಿ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಸನ್ಮಾನಿಸಿದರು. ಅಲ್ಲದೇ, ಬಂಜಾರಾ ಸಮುದಾಯ ಮಹಿಳೆ ಕಸುತಿ ಮಾಡುತ್ತಿರುವ ಪ್ರತಿಮೆಯ ಸ್ಮರಣಿಕೆ ಹಾಗೂ ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪದ ಸ್ಮರಣಿಕೆಯನ್ನು ಪ್ರಧಾನಿ ಮೋದಿ ಅವರಿಗೆ ಪ್ರದಾನ ಮಾಡಲಾಯಿತು. ನಂತರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಪ್ರಧಾನಿ ಚಾಲನೆ ನೀಡಿದರು. ಇದೇ ವೇಳೆ ನಗಾರಿ ಬಾರಿಸಿವ ಮೂಲಕ ಮೋದಿ ಗಮನ ಸೆಳೆದರು.

ಈ ಸಂದರ್ಭ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಸುದೀರ್ಘವಾಗಿ ಆಡಳಿತ ನಡೆಸಿದವರು ದಲಿತರು, ಆದಿವಾಸಿಗಳು ಮತ್ತು ವಂಚಿತರ ಏಳಿಗೆ ಬಗ್ಗೆ ಗಮನ ಹರಿಸಲಿಲ್ಲ. ಸಮಾಜದ ವಂಚಿತ ವರ್ಗಗಳ ಹೆಸರಲ್ಲಿ ಕೇವಲ ಘೋಷವಾಕ್ಯಗಳ ಮೂಲಕ ಅವರ ಮತಗಳನ್ನು ಮಾತ್ರ ಪಡೆದರು. ಆದರೆ, ಈ ಸಮಾಜದ ಜನರ ಅಭಿವೃದ್ಧಿಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ನಾವು ವಂಚಿತ ವರ್ಗಗಳ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಮೊದಲ ಬಾರಿಗೆ ದಲಿತರು, ವಂಚಿತರಿಗೆ ಸರಿಯಾದ ಅವಕಾಶ, ಗೌರವ ಸಿಗುತ್ತಿದೆ. ಶೌಚಾಲಯ, ವಿದ್ಯುತ್​ ಜೊತೆಗೆ ಮೂಲಸೌಕರ್ಯಗಳನ್ನು ವೇಗವಾಗಿ ಒದಗಿಸಲಾಗುತ್ತಿದೆ. ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ತರಲಾಗಿದೆ. ಶೋಷಿತ ವರ್ಗಗಳ ಜನತೆ ತಮ್ಮ ಹಕ್ಕುಗಳನ್ನು ಅವರು ಪಡೆಯುತ್ತಿದ್ದಾರೆ ಪ್ರಧಾನಿ ಮೋದಿ ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಆರ್​.ಅಶೋಕ್, ಪ್ರಭು ಚವ್ಹಾಣ್, ಮುರುಗೇಶ್ ನಿರಾಣಿ, ಸಂಸದ ಉಮೇಶ್​ ಜಾಧವ್​, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್​ ಸೇರಿದಂತೆ ಅವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!