Saturday, August 13, 2022

Latest Posts

ತನ್ವೀರ್ ಸೇಠ್‌ರನ್ನು ಕಾಂಗ್ರೆಸ್ ವಜಾ ಮಾಡಿದ್ರೆ ಜೆಡಿಎಸ್‌ಗೆ ಸ್ವಾಗತಿಸುತ್ತೇವೆ: ಸಾ.ರಾ.ಮಹೇಶ್

ಹೊಸ ದಿಗಂತ ವರದಿ, ಮೈಸೂರು:

ಮೈಸೂರು ಮಹಾನಗರಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ವಿವಾದ ಪ್ರಕರಣದಲ್ಲಿ ಮೈಸೂರಿನ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರನ್ನು ಕಾಂಗ್ರೆಸ್ ವಜಾ ಮಾಡಿದರೆ, ಅವರು ಜೆಡಿಎಸ್‌ಗೆ ಸೇರಲು ನಾವು ಆಹ್ವಾನಿಸುತ್ತೇವೆ, ಅವರು ಬಂದರೆ ಸ್ವಾಗತಿಸುತ್ತೇವೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹೇಳಿದರು.
ಭಾನುವಾರ ಮೈಸೂರಿನಲ್ಲಿರುವ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ತನ್ವಿರ್ ಸೇಠ್ ಅಲ್ಪಸಂಖ್ಯಾತ ಮುಖಂಡ, ಅವರ ಬಗ್ಗೆ ನಮಗೆ ಗೌರವವಿದೆ. ಅವರು ಜೆಡಿಎಸ್‌ಗೆ ಬಂದರೆ ಸ್ವಾಗತ ಎಂದು ಬಹಿರಂಗವಾಗಿ ಆಹ್ವಾನ ನೀಡಿದರು.
ಮೂರು ಅವಧಿಗೆ ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ, 2ಅವಧಿಯ ಮೇಯರ್ ಸ್ಥಾನ ಕಾಂಗ್ರೆಸ್‌ಗೆ ಎಂದು ಬಿಟ್ಟುಕೊಡಬೇಕು ಎಂದು ಮಾತುಕತೆಯಾಗಿತ್ತು. ರಾಜ್ಯದಲ್ಲಿ ಎರಡು ಪಕ್ಷಗಳ ನಡುವಿನ ಮೈತ್ರಿ ಮುರಿದು ಬಿದ್ದಿದ್ದರಿಂದ, ಕೆಲವು ಸನ್ನಿವೇಶಗಳು ಪ್ರಾರಂಭವಾಯಿತು. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಬಗ್ಗೆ ಹೋಟೆಲ್‌ನಲ್ಲಿದ್ದು ರಾಜಕಾರಣ ಮಾಡುತ್ತಾರೆ ಎನ್ನುತ್ತಿದ್ದರು. ಹೋಟೆಲ್‌ನಲ್ಲಿ ಕುಳಿತು ರಾಜಕಾರಣ ಮಾಡಲು ಕಾರಣ ಯಾರು ಎಂದು ಪ್ರಶ್ನಿಸಿದರು.
ನಾವು ವಾಸ್ತವವಾಗಿ ಯಾರೊಂದಿಗೂ ದೊಡ್ಡ ಮಟ್ಟದಲ್ಲಿ ಮಾತುಕತೆ ನಡೆಸಿರಲಿಲ್ಲ. ಕಾಂಗ್ರೆಸ್‌ನ ಅಧ್ಯಕ್ಷರು ಹಾಗೂ ಶಾಸಕ ತನ್ವಿರ್ ಸೇಠ್ ನನ್ನ ಕಚೇರಿಗೆ ಬರುತ್ತೇನೆ ಅಂದರು, ಅದಕ್ಕೆ ನಾನು ಬನ್ನಿ ಅಂದೆ. 3 ಅವಧಿಯ ಮೇಯರ್ ಸ್ಥಾನ ನಿಮಗೆ, ನಮಗೆ 2 ಅವಧಿಯ ಸ್ಥಾನ ಎಂದು ಅವರೇ ಹೇಳಿದ್ದರು ಎಂದು ಸ್ಪಷ್ಟಪಡಿಸಿದರು.
ಬಳಿಕ ಬಿಜೆಪಿ ಬಳಗ ನನ್ನ ಕಚೇರಿಗೆ ಬಂದು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದರು. ಇದನ್ನು ರಾಜ್ಯ ನಾಯಕರ ಗಮನಕ್ಕೆ ತರುತ್ತೇವೆ ಎಂದು ಹೇಳಿದ್ದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎರಡು ಬಾರಿ ದೂರವಾಣಿ ಮೂಲಕ ಮಾತನಾಡಿದ್ದರು. ಇದನ್ನು ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ತಿಳಿಸಿದ್ದೆವು. ನಾನು ರಾಜ್ಯಾಧ್ಯಕ್ಷರಾಗಿರುವಾಗ ಮೈಸೂರು ಮೇಯರ್ ಸ್ಥಾನ ಪಡೆಯಲಿಲ್ಲ ಎಂಬAತಾಗುತ್ತದೆ. ಆದ್ದರಿಂದ ಕಾಂಗ್ರೆಸ್ ಜೊತೆ ಬನ್ನಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಬಳಿಕ ತನ್ವಿರ್ ಸೇಠ್ ಭೇಟಿ ಮಾಡಿದೆವು. ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಸಹ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದರು ಎಂದು ನಡೆದ ರಾಜಕೀಯ ಬೆಳವಣಿಗೆ ಕುರಿತು ವಿವರಿಸಿದರು.
ಕಾಂಗ್ರೆಸ್‌ನಲ್ಲಿ ಟಿಕೆಟ್ ನೀಡದ ಹಿನ್ನೆಲೆ ಶ್ರೀಧರ್ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಗೆದ್ದಿದ್ದರು. ಸಮೀವುಲ್ಲಾ, ಕೆ.ವಿ.ಶ್ರೀಧರ್ ಹಾಗೂ ಮ.ವಿ.ರಾಮಪ್ರಸಾದ್‌ಗೆ ವರ್ಕ್ ಕಮಿಟಿ ಕೊಡುವುದಾಗಿ ತೀರ್ಮಾನವಾಗಿ ಬೆಂಬಲ ಪಡೆದಿದ್ದೆವು. ಪಕ್ಷೇತರರ ಬೆಂಬಲ ಪಡೆದು ಸ್ವತಂತ್ರವಾಗಿ ಸ್ಪರ್ಧಿಸುವ ಇಂಗಿತವಿತ್ತು.
ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಆಗಲು ಶಾಸಕ ಜಿ.ಟಿ.ದೇವೇಗೌಡ ಹಾಗೂ ಸಂದೇಶ್ ನಾಗರಾಜ್ ಕಾರಣ. ಅವರು ಬಂದಿದ್ದರೆ ನಾವು ಮೈತ್ರಿಯನ್ನು ಮಾಡಿಕೊಳ್ಳುತ್ತಿರಲಿಲ್ಲ. ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದೇವು ಎಂದು ತಿಳಿಸಿದರು.
ನಗರ ಪಾಲಿಕೆಯಲ್ಲಿನ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದರಲ್ಲದೇ, ಸಿದ್ದರಾಮಯ್ಯರಿಗೆ ಅವರ ತವರು ಜಿಲ್ಲೆ ಮೈಸೂರಿನಲ್ಲೇ ಜೆಡಿಎಸ್‌ನ ಶಕ್ತಿಯನ್ನು ತೋರಿಸಿದ್ದೇವೆ. ಪ್ರಾದೇಶಿಕ ಪಕ್ಷವನ್ನು ಹಗುರವಾಗಿ ನೋಡಬೇಡಿ ಎಂದರು.
ಕಾಂಗ್ರೆಸ್ ನಾಯಕರು ತಮ್ಮ ಮಾತಿನ ಮೇಲೆ ಹಿಡಿತ ಹೊಂದಿರಬೇಕು. ಯಾವುದೇ ಡ್ರಾಮಾ, ಗೊಂದಲಗಳಿಲ್ಲದೆ ಈ ಬಾರಿಯೇ ಮೇಯರ್ ಸ್ಥಾನವನ್ನು ಕೊಡುತ್ತಿದ್ದೇವು. ಆದರೆ, ಜೆಡಿಎಸ್ ಬಗ್ಗೆ ಹೀನಾಯವಾಗಿ ಮಾತನಾಡಿದ್ದರಿಂದ, ಮೇಯರ್ ಸ್ಥಾನವನ್ನು ಕೊಡಲಿಲ್ಲ. ಶಕ್ತಿ ತೋರಿಸಲು ಅಭ್ಯರ್ಥಿ ಹಾಕಿದೇವು ಅಷ್ಟೇ ಎಂದು ಹೇಳಿದರು. ಇದು ನಮ್ಮ ಪಕ್ಷದ ಬಗ್ಗೆ ಮಾತನಾಡಿದ್ದಕ್ಕೆ ಸ್ಯಾಂಪಲ್ ಮಾತ್ರ. ಮತ್ತೆ ಪ್ರಾದೇಶಿಕ ಪಕ್ಷದ ಬಗ್ಗೆ ಮಾತನಾಡಿದರೆ, ಏನು ಬೇಕಾದರೂ ಆಗಬಹುದು. ಕಾಂಗ್ರೆಸ್‌ನ ಒಬ್ಬ ನಾಯಕರು ನಮ್ಮ ಪಕ್ಷದ ಬಗ್ಗೆ ಮಾತನಾಡಿದ್ದಕ್ಕೆ ಇಷ್ಟು ತೋರಿಸಿದ್ದೇವೆ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದನ್ನು ಮುಂದುವರೆಸಿದರೆ, ಮತ್ತೆ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss