ಶ್ರೀಮದುತ್ತರಾಧಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಗಳಿಂದ ತಪ್ತ ಮುದ್ರಧಾರಣ, ಸಂಸ್ಥಾನ ಪೂಜೆ

ಹೊಸದಿಗಂತ ವರದಿ ಬಳ್ಳಾರಿ:
ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀಮದುತ್ತರಾಧಿ ಮಠದಲ್ಲಿ, ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀಮದುತ್ತರಾದಿಮಠದ ಶ್ರೀ1008 ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅವರು ಮಂಗಳವಾರ ಭಕ್ತರಿಗೆ ತಪ್ತ ಮುದ್ರಧಾರಣೆ ನೆರವೇರಿಸಿದರು. ನಗರ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರೀಗಳ ದರ್ಶನ, ಫಲ ಮಂತ್ರಾಕ್ಷತೆ ಪಡೆದು ಭಕ್ತಿ ಸಮರ್ಪಿಸಿದರು.

ನಂತರ ಶ್ರೀಮಠದ ಕಡಗೋಲು ಗೋಪಾಲಕೃಷ್ಣ ಸೇರಿ ಪಂಚ ವೃಂದಾವನಗಳಿಗೆ ವಿಶೇಷ ಪೂಜೆ, ಶಿಷ್ಯಂದಿರಿಗೆ ಪಾಠ ಪ್ರವಚನ ನೀಡಿದರು. ನಂತರ ಗಾಂಧಿನಗರ ಬಡಾವಣೆ, ಬಾಲ ಭಾರತಿ ಶಾಲೆ ಬಳಿಯ ಶ್ರೀ ಕೇಶವಚಾರ್ಯ ಅವರ ನಿವಾಸದಲ್ಲಿ ಶ್ರೀಸತ್ಯಾತ್ಮ ತೀರ್ಥ ಸ್ವಾಮೀಜಿ ಅವರು ಸಂಸ್ಥಾನ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀಮನ್ಮೂಲ ರಾಮದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಶ್ರೀಮದುತ್ತರಾಧಿಮಠದ ಆವರಣದಲ್ಲಿ ಎಲ್ ಇಡಿ ಪರದೆಯಲ್ಲಿ ಶ್ರೀಮನ್ಮೂಲರಾಮದೇವರ ಸಂಸ್ಥಾನ ಪೂಜೆಯ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.

ಆಗಮಿಸಿದ ಎಲ್ಲ ಭಕ್ತರಿಗೂ ಫಲ ಮಂತ್ರಾಕ್ಷತೆ, ತೀರ್ಥ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮದುತ್ತರಾಧಿಮಠದ ಪ್ರಧಾನ ಅರ್ಚಕರು ಹಾಗೂ ವ್ಯವಸ್ಥಾಪಕರಾದ ಪಂ.ಪ್ರವೀಣ್ ಆಚಾರ್ಯ, ಪಂ.ನವೀನ್ ಆಚಾರ್ಯ ಸೇರಿದಂತೆ ವಿಪ್ರ ಸಮುದಾಯದ ಅನೇಕ ಮುಖಂಡರು, ಭಕ್ತರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!