ಉಡುಪಿಯ ವಿದ್ಯಾಧೀಶತೀರ್ಥ ಶ್ರೀಗಳಿಂದ ನೂರಾರು ಭಕ್ತರಿಗೆ ತಪ್ತ ಮುದ್ರಾಧಾರಣೆ

ಹೊಸದಿಗಂತ ವರದಿ, ಮೈಸೂರು
ಉಡುಪಿಯ ಪಲಿಮಾರು ಶ್ರೀ ಶ್ರೀ ವಿದ್ಯಾಧೀಶ ತೀರ್ಥಸ್ವಾಮಿ ಹಾಗೂ ಕಿರಿಯ ಶ್ರೀಗಳಾದ ವಿದ್ಯಾ ರಾಜೇಶ್ವರಸ್ವಾಮಿಯವರು ಭಾನುವಾರ ಮೈಸೂರಿನಲ್ಲಿ ನೂರಾರು ಮಂದಿ ಭಕ್ತರಿಗೆ ಶಂಖ ಚಕ್ರಗಳ ಮುದ್ರಾಧಾರಣೆ ನೆರವೇರಿಸಿದರು.
ಆಷಾಢ ಮಾಸದ ಪ್ರಥಮ ಏಕಾದಶಿ ಪರ್ವಕಾಲ ಹಿನ್ನೆಲೆಯಲ್ಲಿ ತಪ್ತ ಮುದ್ರಾಧಾರಣೆ ಕಾರ್ಯಕ್ರಮವನ್ನು ಮೈಸೂರಿನ ಸರಸ್ವತಿಪುರಂ ಶ್ರೀ ಕೃಷ್ಣಧಾಮ ಮಠದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀಕೃಷ್ಣ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿತ್ತು. ಬೆಳಿಗ್ಗಿನಿಂದಲೇ ಮಠಕ್ಕೆ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ತೋಳಿಗೆ, ಎದೆಯ ಭಾಗಕ್ಕೆ ಹಾಗೂ ಹೊಟ್ಟೆಯ ಮೇಲೆ ಶಂಖ ಹಾಗೂ ಚಕ್ರದ ಮುದ್ರೆ ಹಾಕಿಸಿಕೊಂಡರು.
ನೂರಾರು ಮಂದಿ ಭಕ್ತರಿಗೆ ಶ್ರೀಗಳು ಮುದ್ರಾಧಾರಣೆ ಮಾಡಿದರು. ಬಳಿಕ ಮಾತನಾಡಿದ ಉಡುಪಿ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥಸ್ವಾಮಿ, ಆಷಾಢಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಿಂದ ಉತ್ಥಾನದ್ವಾದಶಿಯ ತನಕ ಶ್ರೀಮನ್ನಾರಯಣನು ಯೋಗನಿದ್ರೆಯಲ್ಲಿ ತೊಡಗುತ್ತಾನೆ, ಅನ್ನೋ ನಂಬಿಕೆ ಇದೆ. ಮಳೆಗಾಲದಲ್ಲಿ ಸೊಳ್ಳೆ, ಕ್ರಿಮಿ ಕೀಟಗಳಿಂದ ಎದುರಾಗುವ ರೋಗ ರುಜಿನಗಳನ್ನು ಎದುರಿಸಲು ಬೇಕಾದ, ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೂ ತಪ್ತ ಮುದ್ರಾಧಾರಣೆ ಪೂರಕವಾಗಲಿದೆ.
ಚಾತುರ್ಮಾಸ್ಯ ಕೂರುವ ಮೊದಲು ಗೃಹಸ್ಥರು ಹಾಗೂ ಯತಿಗಳು ತಪ್ತ ಮುದ್ರಾಧಾರಣೆ ಮಾಡಿಸಿಕೊಳ್ಳಬೇಕು. ಅನಾನುಕೂಲವಾದವರು ಏಕಾದಶಿ ದಿನದ ಹೊರತಾಗಿಯೂ ಮುದ್ರಾ ಧಾರಣೆ ಮಾಡಿಸಿಕೊಳ್ಳಬಹುದು ಎಂದು ಶ್ರೀಗಳು ಹೇಳಿದರು.
ಶ್ರೀ ಕೃಷ್ಣಾ ಮಿತ್ರಮಂಡಳಿಯ ಅಧ್ಯಕ್ಷ ಸುಬ್ರಹ್ಮಣ್ಯ ತಂತ್ರಿ ಮಾತನಾಡಿ, ಪ್ರತಿವರ್ಷವೂ ನಾನಾಕಡೆಗಳಿಂದ ಭಕ್ತರು ಆಗಮಿಸಿ ತಪ್ತ ಮುದ್ರೆಯನ್ನು ಹಾಕಿಸಿಕೊಳ್ಳುತ್ತಾರೆ. ಸುದರ್ಶನ ಹೋಮವನ್ನು ನಡೆಸಿ, ಅದರಲ್ಲಿ ಕಾಯಿಸಿದ ಶಂಖ, ಚಕ್ರ, ಗದ, ಪದ್ಮ ಚಿಹ್ನೆಯನ್ನು ಎದೆಯ ಭಾಗ, ಎಡ ಮತ್ತು ಬಲ ತೋಳಿಗೆ ಹಾಕುವುದನ್ನು ತಪ್ತ ಮುದ್ರಾಧಾರಣೆ ಎಂದು ಕರೆಯಲಾಗುತ್ತದೆ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಶ್ರೀವತ್ಸ, ರವಿಶಾಸ್ತಿç ,ಪುಟ್ಟಣ್ಣ ಭಟ್ ,ಸುಧೀರ್ ಆಚಾರ್ ,ಗಿರೀಶ್ ಹೆಬ್ಬಾರ್ ,ಪ್ರೀತಂಪುರಾಣಿಕ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!