ಕಾಶ್ಮೀರ ಕಣಿವೆಯಲ್ಲಿ ಮತ್ತೆ ಹೆಚ್ಚುತ್ತಿದೆ ನಿರಾಶ್ರಿತ ಪಂಡಿತರ ಕೊಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕತಾವಾದಿ ಭಯೋತ್ಪಾದಕರ ಅಟ್ಟಹಾಸ ಮತ್ತೆ ಹೆಚ್ಚಾಗುತ್ತಿದೆ. ದಶಕಗಳಿಂದ ತುಳಿತಕ್ಕೊಳಗಾಗಿರುವ ಕಾಶ್ಮೀರಿ ಪಂಡಿತರ ಉದ್ದೇಶಿತ ಕೊಲೆ ಪ್ರಕರಣಗಳು ಮತ್ತೆ ವರದಿಯಾಗುತ್ತಲೇ ಇದೆ. ಈ ಕುರಿತು ಇಂಡಿಯನ್‌ ಎಕ್ಸಪ್ರೆಸ್‌ ವರದಿಯು ಆತಂಕಕಾರಿ ಮಾಹಿತಿಯನ್ನು ಹೊರಹಾಕಿದೆ. ಜನವರಿಯಿಂದ ಇಲ್ಲಿಯವರೆಗೆ ಪೋಲೀಸ್‌ ಅಧಿಕಾರಿಗಳು. ಶಿಕ್ಷಕರು ಸರಪಂಚರು ಸೇರಿದಂತೆ ಒಟ್ಟೂ 16 ಜನರು ಉದ್ದೇಶಿತ ಕೊಲೆಗೆ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ಈ ಕುರಿತು ಜಮ್ಮು ಕಾಶ್ಮೀರದ ಡಿಜಿಪಿ ದಿಲ್ಭಾಗ್‌ ಸಿಂಗ್‌ ಪ್ರತಿಕ್ರಿಯಿಸಿ “ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರು ಅಲ್ಪಸಂಖ್ಯಾತ ಕಾಶ್ಮೀರಿ ಪಂಡಿತರು, ನಾಗರಿಕರು ಮತ್ತು ಸರ್ಕಾರದಲ್ಲಿರುವ ಜನರನ್ನು ಗುರಿಯಾಗಿಸಿ ಭಯ ಸೃಷ್ಟಿಸುತ್ತಿದ್ಧಾರೆ. ತಮ್ಮ ಆದೇಶಗಳಿಗೆ ಸ್ಥಳೀಯರು ಪ್ರತಿಕ್ರಿಯಿಸುತ್ತಿಲ್ಲ ಎಂದು ಸಮಾಜದ ವಿವಿಧ ವರ್ಗಗಳ ಸದಸ್ಯರ ಮೇಲೆ ದಾಳಿ ಮಾಡುವ ಮೂಲಕ ಭಯೋತ್ಪಾದಕರು ಮತ್ತೆ ತಮ್ಮ ಅಸ್ತಿತ್ವ ತೋರಿಸಲು ಬಯಸುತ್ತಿದ್ದಾರೆ. ಕಾಶ್ಮೀರಿ ಪಂಡಿತರು ಮತ್ತು ಅವರನ್ನು ಬೆಂಬಲಿಸುವವರ ಮೇಲೆ ದಾಳಿ ಮಾಡಲಾಗುತ್ತಿದೆ” ಎಂದಿದ್ದಾರೆ.

ಈ ರೀತಿಯ ಉದ್ದೇಶಿತ ಕೊಲೆಯು ಕಳೆದ ವರ್ಷದಿಂದಲೇ ನಡೆಯುತ್ತಿದ್ದು 2021ರ ಫೆಬ್ರವರಿಯ ನಂತರ ಶ್ರೀನಗರದ ಕೃಷ್ಣ ಧಾಬಾದ ಮಾಲೀಕನ ಮಗನನ್ನು ಅವನ ರೆಸ್ಟೋರೆಂಟ್‌ನಲ್ಲಿ ಗುಂಡು ಹಾರಿಸಿ ಹತ್ಯೆಗೈದ ನಂತರ ಸರಣಿ ಕೊಲೆಗೆ ಕಾಶ್ಮೀರ ಸಾಕ್ಷಿಯಾಯಿತು. ಅಕ್ಟೋಬರ್ 5, 2021 ರಂದು, ಪ್ರಮುಖ ರಸಾಯನಶಾಸ್ತ್ರಜ್ಞ ಎಂ ಎಲ್ ಬಿಂದ್ರೂ ಅವರ ಅಂಗಡಿಯಲ್ಲಿ ಕೊಲ್ಲಲ್ಪಟ್ಟರು ಇದಾದ ಎರಡು ದಿನಗಳ ನಂತರ ಸಂಗಮ್‌ನ ಸರ್ಕಾರಿ ಬಾಲಕರ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಸುಪಿಂದರ್ ಕೌರ್ ಮತ್ತು ಶಾಲೆಯ ಶಿಕ್ಷಕ ದೀಪಕ್ ಚಂದ್ ಅವರು ಭಯೋತ್ಪಾದಕರ ಗುಂಡೇಟಿಗೆ ಬಲಿಯಾದರು.

ಈ ವರ್ಷದ ಆರಂಭದಿಂದಲೂ ಮೂವರು ಸರಪಂಚರು ಸೇರಿದಂತೆ ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಏಪ್ರಿಲ್ 4 ರಂದು, ಕಾಶ್ಮೀರಿ ಪಂಡಿತ್ ಸಮುದಾಯದ ಬಾಲ್ ಕ್ರಿಶನ್ ಅವರನ್ನು ಚೌಟಿಗಾಮ್ ಶೋಪಿಯಾನ್‌ನಲ್ಲಿರುವ ಅವರ ಮನೆಯ ಬಳಿ ಶಂಕಿತ ಉಗ್ರರು ಹತ್ಯೆ ಮಾಡಿದ್ದರು. ಇತ್ತೀಚೆಗಷ್ಟೇ, ಪ್ರಧಾನಮಂತ್ರಿ ಪುನರ್ವಸತಿ ಪ್ಯಾಕೇಜ್‌ನಡಿಯಲ್ಲಿ ಕೆಲಸ ಮಾಡುತ್ತಿರುವ ಕಾಶ್ಮೀರದ ಕಂದಾಯ ಇಲಾಖೆಯ ಕಾಶ್ಮೀರಿ ಪಂಡಿತ್ ರಾಹುಲ್‌ ಭಟ್‌ರನ್ನು ಅವರ ಕಛೇರಿಯಲ್ಲೇ ಹತ್ಯೆ ಮಾಡಲಾಯಿತು. ಮೇ 25 ರಂದು, ಕಾಶ್ಮೀರಿ ಟಿವಿ ನಟಿ ಅಮ್ರೀನ್‌ ಭಟ್‌ ಮನೆಯ ಮೇಲೆ ದಾಳಿ ನಡೆಸಿ ಅವರನ್ನು ಭಯೋತ್ಪಾದಕರು ಹತ್ಯೆ ಮಾಡಿದರು. ನಿನ್ನೆಯಷ್ಟೇ ಕಾಶ್ಮೀರಿ ಪಂಡಿತರ ಸಮುದಾಯದ ಸರ್ಕಾರಿ ಶಾಲಾ ಶಿಕ್ಷಕಿ ರಜನಿ ಭಲ್ಲಾ ಅವರನ್ನು ಶಾಲೆಯ ಒಳಗೇ ಹತ್ಯೆ ಮಾಡಲಾಯಿತು. ಹೀಗೆ ನಿರಾಶ್ರಿತ ಕಾಶ್ಮೀರಿ ಪಂಡಿತರ ಮೇಲಿನ ಆಕ್ರಮಣ ಮತ್ತೆ ಮುಂದುವರೆಯುತ್ತಲೇ ಇದೆ.

ವಿವಿಧ ಭಯೋತ್ಪಾದನಾ ಸಂಘಟನೆಯ ಭಯೋತ್ಪಾದಕರನ್ನು ಹತ್ಯೆ ಮಾಡುತ್ತಿರುವುದು ಹಾಗೂ ಅವರ ನಾಯಕತ್ವ, ಬೆಂಬಲದ ರಚನೆಗಳನ್ನು ನಾಶ ಮಾಡುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುತ್ತಿರುವುದರಿಂದ ಭಯೋತ್ಪಾದಕರು ಕಂಗೆಟ್ಟಿದ್ಧಾರೆ. ಆದ್ದರಿಂದಲೇ ಅವರು ತಮ್ಮ ಕಾರ್ಯತಂತ್ರಗಳನ್ನು ಬದಲಾಯಿಸಿದ್ದು ಅಮಾಯಕ ನಾಗರಿಕರು, ರಾಜಕಾರಣಿಗಳು ಮತ್ತು ಮಹಿಳೆಯರು ಸೇರಿದಂತೆ ಅಲ್ಪ ಸಂಖ್ಯಾತರಾಗಿರುವ ಕಾಶ್ಮೀರಿ ಪಂಡಿತ ಸಮುದಾಯದ ಮುಗ್ಧ ನಾಗರಿಕರನ್ನು ಗುರಿಯಾಗಿಸಲಾಗುತ್ತಿದೆ ಎನ್ನಲಾಗಿದೆ. ಇದರಿಂದ ಭಯಭೀತರಾಗಿರುವ ಕಾಶ್ಮೀರಿ ಪಂಡಿತ ಸಮುದಾಯವು ತಮಗೆ ಸೂಕ್ತ ರಕ್ಷಣೆ ಒದಗಿಸುವಂತೆ ಪ್ರತಿಭಟನೆ ನಡೆಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!